Advertisement

ಸಾರ್ವಜನಿಕರಿಗೆ ಸತಾಯಿಸಿದರೆ ಹುಷಾರ್‌

12:07 PM Jun 02, 2018 | |

ಮುದ್ದೇಬಿಹಾಳ: ಸರ್ಕಾರಿ ಕಚೇರಿ ಮುಖ್ಯಸ್ಥರು ತಮ್ಮ ಕಚೇರಿಯಲ್ಲಿರುವ ಕೆಳ ಹಂತದ ಸಿಬ್ಬಂದಿ, ಸಾರ್ವಜನಿಕರ ಪೀಡನೆಗೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕು. ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಬರುವ ಜನರನ್ನು ಸತಾಯಿಸುವುದು, ಅವರಿಂದ ಏನನ್ನಾದರೂ ನಿರೀಕ್ಷಿಸುವುದು ಮುಂತಾದ ಸಲ್ಲದ ಚಟುವಟಿಕೆಗಳಿಗೆ ನಿಯಂತ್ರಣ ಹಾಕಬೇಕು. ಜನರ ಕೆಲಸವನ್ನು ತ್ವರಿತವಾಗಿ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸಬೇಕು ಎಂದು ನೂತನ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಸೂಚನೆ ನೀಡಿದ್ದಾರೆ.

Advertisement

ಇಲ್ಲಿನ ತಾಪಂ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಲೆಕ್ಕಾಧಿಕಾರಿಗಳು, ಸರ್ಕಲ್‌ಗ‌ಳು, ಕೃಷಿ ಇಲಾಖೆ ಗ್ರಾಮ ಸೇವಕರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಜನರ ಗೋಳು ಹೊಯ್ದುಕೊಳ್ಳುವುದನ್ನು ಇನ್ನು ಮುಂದೆ ಕೈ ಬಿಡಬೇಕು. ಜನರ ಪೀಡಿಸುವ ನೌಕರರಿಗೆ ತಪ್ಪು ತಿದ್ದಿಕೊಳ್ಳಲು 3 ಅವಕಾಶ ಕೊಡುವೆ, ಸುಧಾರಿಸದಿದ್ದರೆ ಕ್ರಮ ಜರುಗಿಸುವೆ. ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡುವ ವಿಷಯದಲ್ಲಿ ನೋ ಕಾಂಪ್ರೊಮೈಸ್‌.

ಈ ತಾಲೂಕಲ್ಲಿ ಬಡವರು ನೆಮ್ಮದಿ ಜೀವನ ನಡೆಸುವಂತಾಗಬೇಕು. ಅವರಿಗೆ ಅಡೆ ತಡೆ ಇಲ್ಲದೆ ಸರ್ಕಾರಿ ಸೌಲಭ್ಯ ದೊರಕುವಂತಾಗಬೇಕು. ಸರ್ಕಾರಿ ಕಚೇರಿಗೆ ಕಾರ್ಯನಿಮಿತ್ತ ಬರುವವರೊಂದಿಗೆ ಗೌರವ, ಸೌಜನ್ಯತೆ, ಮಾನವೀಯತೆ ತೋರಿಸಿ. ಬಡವ ಬದುಕಲು ಅಗತ್ಯವಾದ ಕನಿಷ್ಠ ಅವಶ್ಯಕತೆ ಪೂರೈಸಿ ಎಂದು ಸ್ಪಷ್ಟವಾಗಿ ಹೇಳಿದರು.
 
ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಿ: 25 ವರ್ಷ ಒಬ್ಬರದ್ದೇ ಆಡಳಿತದಲ್ಲಿ (ಕಾಂಗ್ರೆಸ್‌ನ ಸಿ.ಎಸ್‌. ನಾಡಗೌಡ) ಪಳಗಿರುವ ಅಧಿಕಾರಿಗಳು ಸೇರಿ ಸರ್ಕಾರಿ ನೌಕರರು ನಾನು ಶಾಸಕನಾಗಿ ಆಯ್ಕೆಗೊಂಡ ಮೇಲೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಪರಸ್ಪರ ಸಹಕಾರದಿಂದ ಕೆಲಸ ಮಾಡಿ ತಾಲೂಕನ್ನು ಮಾದರಿಯಾಗಿ ಮಾಡಲು ಕೈ ಜೋಡಿಸಬೇಕು. ಇಲ್ಲಿ ಸೇವೆ ಸಲ್ಲಿಸುತ್ತಿರುವವರು ಇಲ್ಲಿಯೇ ಮುಂದುವರಿಯಬೇಕು ಎನ್ನುವುದು ನನ್ನ ಅಪೇಕ್ಷೆ. ಯಾರ ಮೇಲೂ ದ್ವೇಷ ಇಲ್ಲ. ಚುನಾವಣೆ ವೇಳೆ ನಡೆದದ್ದನ್ನು ಮನಸ್ಸಲ್ಲಿಟ್ಟುಕೊಳ್ಳೊಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮ ಗೌರವವನ್ನೂ ಉಳಿಸಿಕೊಂಡು ನನಗೂ ಗೌರವ ತಂದು ಕೊಡಿ ಎಂದರು. 

ಕಾಲ್‌ಸೆಂಟರ್‌ ಪ್ರಾರಂಭ: ಮತಕ್ಷೇತ್ರದ ಸಮಸ್ಯೆ ನಿವಾರಣೆಗೆ ಅತ್ಯಾಧುನಿಕ ಕಾಲ್‌ಸೆಂಟರ್‌ ಪ್ರಾರಂಭಿಸಲಾಗುತ್ತದೆ. ಎಲ್ಲ ಅಧಿಕಾರಿಗಳ ವಾಟ್ಸಾಆ್ಯಪ್‌ ಗ್ರುಪ್‌ ಮಾಡಲಾಗುತ್ತದೆ. ನನಗೆ ಬರುವ ಜನರ ಅಹವಾಲುಗಳನ್ನು ಅದರಲ್ಲಿ ಹಾಕಲಾಗುತ್ತದೆ. ಇದರಿಂದ ಸಮಸ್ಯೆಗಳಿಗೆ ತಕ್ಷಣದ ಪರಿಹಾರಕ್ಕೆ ಅನುಕೂಲ ಆಗುತ್ತದೆ. ವಾಟ್ಸ್‌ಆ್ಯಪ್‌ ಗ್ರುಪ್‌ನಲ್ಲಿರುವ ಅಧಿಕಾರಿಗಳು ಸಬೂಬು ಹೇಳಲು ಅವಕಾಶ ಇಲ್ಲ. ನಾನು 200 ಕಿ.ಮೀ. ಸ್ಪೀಡ್‌ನ‌ಲ್ಲಿ ಕೆಲಸ ಮಾಡುವೆ, ನನ್ನ ಜೊತೆ ನೀವೆಲ್ಲ ಧಾವಿಸಿ ಬರಬೇಕು ಎಂದು ತಿಳಿಸಿದರು. 

ಅಧಿಕಾರಿಗಳಾದ ಎಸ್‌.ಡಿ. ಗಾಂಜಿ, ಎಂ.ಎಂ. ಬೆಳಗಲ್ಲ, ಜಿ.ಎಸ್‌. ಪಾಟೀಲ, ಅರುಣ ಪಾಟೀಲ, ಆರ್‌.ಎನ್‌. ಹಾದಿಮನಿ, ಸಿ.ಆರ್‌. ಪೊಲೀಸ್‌ ಪಾಟೀಲ, ನಿರ್ಮಲಾ ಸುರಪುರ, ಎನ್‌.ಆರ್‌. ಉಂಡಿಗೇರಿ, ಎಇಇ ಐ.ಆರ್‌. ಮುಂಡರಗಿ, ಡಾ| ಶಿವಾನಂದ ಮೇಟಿ, ರಾಜೇಶ್ವರಿ ನಾಡಗೌಡ, ಪ್ರಶಾಂತ ಶಿವಾಳಕರ, ಎಂ.ಬಿ. ಮಾಡಗಿ, ಮಾರುತಿ ನಡುವಿನಕೇರಿ, ಸವಿತಾ, ತಿಮ್ಮರಾಜಪ್ಪ, ಅನಿತಾ ಸಜ್ಜನ ಮಾತನಾಡಿದರು.

Advertisement

ಎಸ್‌.ಕೆ. ಬಡಿಗೇರ, ಡಾ| ಸಿ.ಸಿ. ತೋಟಗೇರಿ, ಸುಭಾಷಚಂದ್ರ ಚಾಮಲಾಪುರ, ಜೆ.ಬಿ. ರಾಠೊಡ, ಆರ್‌.ಎಸ್‌. ಹಿರೇಗೌಡರ, ಜೆ.ಪಿ. ಶೆಟ್ಟಿ, ಸಿ.ಎಲ್‌. ರಾಠೊಡ, ಎನ್‌.ಬಿ. ನಾಯಕ, ಎಸ್‌.ಎಸ್‌. ಪಾಟೀಲ, ಎಸ್‌.ಬಿ. ಚಲವಾದಿ, ಪಿ.ಎನ್‌. ಜಾಧವ ಸಭೆಯಲ್ಲಿ ಪಾಲ್ಗೊಂಡಿದ್ದರು. ತಾಪಂ ಇಒ ಸುರೇಶ ಭಜಂತ್ರಿ ಸಭೆ ನಿರ್ವಹಿಸಿದರು.

ಶಾಸಕರ ಸಂಪರ್ಕ ಮಾಹಿತಿ: ಎ.ಎಸ್‌. ಪಾಟೀಲ ನಡಹಳ್ಳಿ-ಶಾಸಕರು ಮೋ.9686744993. ಬೆಂಗಳೂರು ಪಿಎ ಬಾಬುರಾವ್‌ ಕುಲಕರ್ಣಿ (ಮೋ. 9916501199), ಮುದ್ದೇಬಿಹಾಳ ಪಿಎ ಬಸನಗೌಡ ಪಾಟೀಲ (ಮೋ. 9972356521), ಇಮೇಲ್‌- mlamuddebihal@gmail.com, ವಾಟ್ಸಾಆ್ಯಪ್‌ ಸಂಖ್ಯೆ-9916501199, 9686744993, 9448030414.

Advertisement

Udayavani is now on Telegram. Click here to join our channel and stay updated with the latest news.

Next