ಆನೇಕಲ್: ಪತ್ನಿಯ ಕತ್ತುಕೊಯ್ದು ಕೊಲೆ ಮಾಡಿದ ಪತಿಯೂ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಯಡವನಹಳ್ಳಿಯಲ್ಲಿ ನಡೆದಿದೆ.
ಗೃಹಿಣಿ ಲಾವಣ್ಯಾ ಕೊಲೆಯಾದ ಮಹಿಳೆ. ಸಂಪತ್‌ಕುಮಾರ್ ಪತ್ನಿ ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಸೈಕೋ ಪತಿ. ಮೂಲತಃ ಕೈವಾರ ಮೂಲದ ಲಾವಣ್ಯಾಳನ್ನು ಕಳೆದ 12 ವರ್ಷ ಹಿಂದೆ ಯಡವನಹಳ್ಳಿಯ ಸಂಪತ್ ಕುಮಾರ್‌ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಗಲಾಟೆ ಮಾಡಿ ಚಿತ್ರಹಿಂಸೆ: ಮದುವೆ ಆದ ಮೂರ್ನಾಲ್ಕು ತಿಂಗಳು ಸಂಸಾರ ಚೆನ್ನಾಗಿಯೇ ಇತ್ತು. ಬಳಿಕ ಪತಿ ಸಂಪತ್ ಪ್ರತಿದಿನ ಮನೆಗೆ ಕುಡಿದು ಬಂದು ಪತ್ನಿ ಲಾವಣ್ಯಾಳ ಶೀಲದ ಬಗ್ಗೆ ಅನುಮಾನಿಸುತ್ತಿದ್ದ. ಇದರ ನಡುವೆ ಇಬ್ಬರಿಗೂ ಗಂಡು ಮಕ್ಕಳು ಆಯಿತು. ಆದರೂ ಸಂಪತ್ ಪತ್ನಿ ಲಾವಣ್ಯಾ ಜೊತೆ ಗಲಾಟೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಬುದ್ಧಿ ಹೇಳಿ ತೆರಳಿದ್ದರು: ಪತಿಯ ಹಿಂಸೆ ತಾಳಲಾರದೆ ಕೆಲ ತಿಂಗಳುಗಳ ಹಿಂದೆ ಪತ್ನಿ ಲಾವಣ್ಯಾ ಮಕ್ಕಳ ಜೊತೆ ತವರು ಮನೆ ಸೇರಿದ್ದಳು. ಬಳಿಕ ಹಿರಿಯರು ರಾಜಿ ಪಂಚಾಯ್ತಿ ನಡೆಸಿ ಮತ್ತೆ ಈ ರೀತಿಯಾಗದಂತೆ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಆದರೆ, ಸಂಪತ್ ಮಾತ್ರ ಬದಲಾಗದೆ ದಿನನಿತ್ಯ ಪತ್ನಿ ಲಾವಣ್ಯಾ ಮೇಲೆ ಅನುಮಾನದಿಂದ ನೋಡಿ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಭಾನುವಾರ ಲಾವಣ್ಯ ಪೋಷಕರು ಮನೆಗೆ ಬಂದು ಮತ್ತೆ ಇಬ್ಬರಿಗೂ ಬುದ್ಧಿವಾದ ಹೇಳಿ ಸಂಜೆ ತೆರಳಿದ್ದರು.
ಮಗುವಿನ ಮೇಲೆಯೂ ಹಲ್ಲೆ: ಈ ವೇಳೆ ಮತ್ತೆ ರಾತ್ರಿ ಮದ್ಯ ಕುಡಿದು ಬಂದ ಸಂಪತ್ ಪತ್ನಿ ಲಾವಣ್ಯಾ ಜೊತೆಗೆ ಗಲಾಟೆ ಮಾಡಿದ್ದಾನೆ. ಮುಂಜಾನೆ 4 ಗಂಟೆಗೆ ಮಲಗಿದ್ದ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಪತ್ನಿ ಲಾವಣ್ಯಾಳ ಕುತ್ತಿಗೆ ಕೊಯ್ದಿದ್ದಾನೆ. ತಾಯಿ ಕಿರುಚಾಡುತ್ತಿದ್ದಂತೆ ಮಕ್ಕಳು ಎದ್ದು, ಬಿಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ 11 ವರ್ಷದ ಮಗನ ಕೈಗೂ ಪಾಪಿ ಸಂಪತ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಮನೆ ಬಾಗಿಲು ತೆಗೆದು ಹೊರಗೆ ಓಡಿ ಬಂದ ಮಕ್ಕಳು ನೆರೆಹೊರೆಯವರನ್ನು ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದು, ಏರಿಯಾದ ಜನರು ಹೊರಗೆ ಬಂದು ನೋಡುವಷ್ಟರಲ್ಲಿ ಪತಿ ಸಂಪತ್ ಮನೆಯಿಂದ ಹೊರಬಂದು ಜನರು ನೋಡ ನೋಡುತ್ತಿದ್ದಂತೆ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಚರಂಡಿಯ ಒಳಗೆ ಬಿದ್ದಿದ್ದಾನೆ.
ಸಾವು ಬದುಕಿನ ನಡುವೆ ಹೋರಾಟ: ಕೂಡಲೇ ಸ್ಥಳೀಯರು ಸಂಪತ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಹಾಗೂ ಅತ್ತಿಬೆಲೆ ಇನ್ಸ್‌ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ಸಂಬಂಧ ದೂರು ದಾಖಲು ಮಾಡಿಕೊಂಡಿದ್ದಾರೆ.