ಪಾಣಿಪತ್: ಹರಿಯಾಣದ ಪಾಣಿಪತ್‌ನ ರಿಶಿಪುರ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪತಿ ಒಂದು ವರ್ಷದಿಂದ ಶೌಚಾಲಯದಲ್ಲಿ ಕೂಡಿಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿದ ಮಹಿಳಾ ರಕ್ಷಣೆ ಮತ್ತು ಬಾಲ್ಯ ವಿವಾಹ ನಿಷೇಧ ಅಧಿಕಾರಿ ರಜನಿ ಗುಪ್ತಾ ಸ್ಥಳಕ್ಕೆ ತೆರಳಿ 35 ವರ್ಷದ ಮಹಿಳೆಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಜನಿ ಗುಪ್ತಾ ಸ್ಥಳೀಯರು ನೀಡಿದ ದೂರಿನ ಆಧಾರದಲ್ಲಿ ನಾವು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಇದು ಸತ್ಯವೆಂದು ತಿಳಿಯಿತು. ಆ ಮಹಿಳೆಯನ್ನು ರಕ್ಷಿಸಿದ್ದೇವೆ. ಆಕೆ ತುಂಬಾ ದುರ್ಬಲಳಾಗಿದ್ದಾಳೆ. ಕೆಲವು ದಿನಗಳಿಂದ ಏನೂ ತಿಂದಿಲ್ಲವೆನಿಸುತ್ತದೆ. ಸಂತ್ರಸ್ತೆಯ ಪತಿ ಆಕೆಯ ಮನಃಸಿಕ ಸ್ಥಿತಿ ಸರಿಯಿಲ್ಲದ ಕಾರಣ ತಾನು ಹೀಗೆ ಮಾಡಿದ್ದಾಗಿ ಹೇಳುತ್ತಿದ್ದಾನೆ. ಆದರೆ ಮೇಲ್ನೋಟಕ್ಕೆ ಆ ಮಹಿಳೆಗೆ ಮಾನಸಿಕ ತೊಂದರೆಯಿಲ್ಲ ಎಂದು ಸ್ಪಷ್ಟವಾಗುತ್ತಿದೆ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.
ಮಹಿಳೆಗೆ ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಈಕೆ ಮಾನಸಿಕ ಅಸ್ವಸ್ಥೆಯೆಂದು ಪತಿ ಆಕೆಯನ್ನು ಕೂಡಿ ಹಾಕಿದ್ದ. ಸರಿಯಾಗಿ ಆಹಾರವನ್ನು ನೀಡಿಲ್ಲವಾದ ಕಾರಣ ಆಕೆ ದೈಹಿಕವಾಗಿಯೂ ದುರ್ಬಲಳಾಗಿದ್ದಳು. ಆಕೆಯನ್ನು ರಕ್ಷಿಸಿದ ನಂತರ ಆಕೆಗೆ ಆಹಾರ ನೀಡಿದಾಗ ಆಕೆ ಎಂಟು ಚಪಾತಿಗಳನ್ನು ತಿಂದಳು ಎಂದು ರಕ್ಷಣಾ ತಂಡದ ಸದಸ್ಯರೊಬ್ಬರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.