Advertisement

ಪತಿ ಹುಡುಕಾಟ

06:00 AM Aug 03, 2018 | |

“ಈ ಚಿತ್ರದ ಹೀರೋ- ಹೀರೋಯಿನ್‌, ಸ್ಟ್ರೆಂಥ್‌ ಎಲ್ಲವೂ ಇವರೇ’
– ಹೀಗೆಂದು ಹೇಳಿ ಪಕ್ಕದಲ್ಲಿ ಶೀತಲ್‌ ಅವರನ್ನು ನೋಡಿದರು ರಾಕೇಶ್‌. ಅವರು ಹಾಗೆ ಹೇಳಲು ಕಾರಣ “ಪತಿಬೇಕು.ಕಾಂ’ ಚಿತ್ರ. ಇದು ರಾಕೇಶ್‌ ನಿರ್ದೇಶನದ ಎರಡನೇ ಚಿತ್ರ. ಈ ಚಿತ್ರದಲ್ಲಿ ಶೀತಲ್‌ ಶೆಟ್ಟಿ ನಾಯಕಿ. ಕೇವಲ ನಾಯಕಿಯಷ್ಟೇ ಅಲ್ಲ, ಇಡೀ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗುವುದು ಕೂಡಾ ಅವರೇ. ಅದೇ ಕಾರಣದಿಂದ ರಾಕೇಶ್‌ ಹಾಗೆ ಹೇಳಿದ್ದು. ರಾಕೇಶ್‌ ಈ ಹಿಂದೆ “ತರೆಲ ನನ್ಮಕ್ಳು’ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾ ಸೆನ್ಸಾರ್‌ಗಾಗಿ ಎಂಟು ತಿಂಗಳು ಓಡಾಡಿದ್ದರಂತೆ ರಾಕೇಶ್‌. ಆದರೆ, “ಪತಿಬೇಕು.ಕಾಂ’ ಚಿತ್ರ ಮಾತ್ರ ಯಾವುದೇ ಸಮಸ್ಯೆ ಇಲ್ಲದೇ ಸೆನ್ಸಾರ್‌ ಆಗಿ “ಯು/ಎ’ ಪ್ರಮಾಣ ಪತ್ರ ಪಡೆದಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಆದ ಕಾರಣ ಯಾವುದೇ ಸಮಸ್ಯೆಯಾಗದೇ ಸೆನ್ಸಾರ್‌ ಆಯಿತು ಎನ್ನುವುದು ರಾಕೇಶ್‌ ಮಾತು. 

Advertisement

“ಪತಿಬೇಕು.ಕಾಂ’ ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ದಾಟಿದ ಹೆಣ್ಣಿಗೆ ಗಂಡು ಹುಡುಕೋದು ಎಷ್ಟು ಕಷ್ಟ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಹಾಗಂತ ಸಿನಿಮಾ ಸೀರಿಯಸ್‌ ಆಗಿ ಸಾಗುವುದಿಲ್ಲ. ತುಂಬಾ ಮಜವಾದ ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ. “ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಇಲ್ಲಿ ಯಾವುದೇ ರೀತಿಯ ಡಬಲ್‌ ಮೀನಿಂಗ್‌ ಸಂಭಾಷಣೆಗಳಾಗಲೀ, ಅಶ್ಲೀಲ ದೃಶ್ಯಗಳಾಗಲೀ ಇಲ್ಲ’ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು ರಾಕೇಶ್‌. ಅದಕ್ಕೆ ಕಾರಣ ಅವರ ಹಿಂದಿನ ಚಿತ್ರ “ತರೆಲ ನನ್ಮಕ್ಳು’ ಡಬಲ್‌ ಮೀನಿಂಗ್‌ ಮೂಲಕ ಹೆಚ್ಚು ಸುದ್ದಿಯಾಗಿತ್ತು. ಇನ್ನು, ಚಿತ್ರಕ್ಕೆ “ಪತಿಬೇಕು.ಕಾಂ’ ಟೈಟಲ್‌ ಕೊಟ್ಟಿದ್ದು ಶೀತಲ್‌ ಶೆಟ್ಟಿಯಂತೆ. ಚಿತ್ರದ ಕಥೆ ಹೇಳಿ, ಈ ಚಿತ್ರಕ್ಕೆ ಯಾವ ಟೈಟಲ್‌ ಹೊಂದುತ್ತದೆ ಎಂದು ಚರ್ಚಿಸುತ್ತಿದ್ದಾಗ, ಶೀತಲ್‌ “ಪತಿಬೇಕು.ಕಾಂ’ ಸೂಚಿಸಿದರಂತೆ. ಶೀತಲ್‌ ಶೆಟ್ಟಿ ತುಂಬಾನೇ ನಗುವುದರಿಂದ ಸೆಂಟಿಮೆಂಟ್‌ ದೃಶ್ಯಗಳಲ್ಲಿ ಕಣ್ಣೀರು ಹಾಕಿಸೋದು ರಾಕೇಶ್‌ಗೆ ತುಂಬಾ ಕಷ್ಟವಾಯಿತಂತೆ.

ಶೀತಲ್‌ ಶೆಟ್ಟಿಯವರು ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಪಾತ್ರವಂತೆ. ಎಲ್ಲಾ ಬಗೆಯ ಭಾವನೆಗಳನ್ನು ವ್ಯಕ್ತಪಡಿಸಲು ಇಲ್ಲಿ ಅವಕಾಶವಿದೆಯಂತೆ. “ಮದುವೆ ವಯಸ್ಸು ದಾಟಿದ ಮಧ್ಯಮ ವರ್ಗದ ಹೆಣ್ಣಿನ ಸ್ಥಿತಿಯನ್ನು ಕಮರ್ಷಿಯಲ್‌ ಅಂಶಗಳೊಂದಿಗೆ ಹೇಳಲಾಗಿದೆ. ಇಲ್ಲಿ ಸಾಕಷ್ಟು ಸೂಕ್ಷ್ಮವಿಚಾರಗಳು ಕೂಡಾ ಹೇಳಲಾಗಿದೆ’ ಎನ್ನುವುದು ಶೀತಲ್‌ ಮಾತು. ಚಿತ್ರವನ್ನು ಶ್ರೀನಿವಾಸ್‌ ಹಾಗೂ ಮಂಜುನಾಥ್‌ ಸೇರಿ ನಿರ್ಮಿಸಿದ್ದಾರೆ. ಇವರ ಜೊತೆ ರಾಕೇಶ್‌ ಕೂಡಾ ಕೈ ಜೋಡಿಸಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದ್ದು, ಚಿತ್ರವನ್ನು ಕುಮಾರ್‌ ವಿತರಣೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next