ಬೆಂಗಳೂರು: ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ರೌಡಿಶೀಟರ್, ಚಾಕುವಿನಿಂದ ಎದೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಾಮಪುರದ ಕ್ರೈಸ್ತ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಅರವಿಂದ್ ಕ್ವಿಂಟನ್ (24) ಆತ್ಮಹತ್ಯೆ ಮಾಡಿಕೊಂಡ ರೌಡಿಶೀಟರ್. ಭಾನುವಾರ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಅರವಿಂದ್, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಬೇಸತ್ತ ಪತ್ನಿ ತವರು ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಬಂದಿದ್ದಾರೆ. ಇದೇ ವೇಳೆ ಅರವಿಂದ್ ಚಾಕುವಿನಿಂದ ಎದೆಗೆ ಇರಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನವಿಡೀ ಕುಡಿತ: ಮೃತ ಅರವಿಂದ್ ವರ್ಷದ ಹಿಂದೆ ಉಮಾದೇವಿ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿ ಕ್ರೈಸ್ತ ಕಾಲೋನಿಯಲ್ಲಿ ನೆಲೆಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ಉಳಿದಿದ್ದ ಈತ, ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ. ಆದರೆ, ನಿತ್ಯ ಮದ್ಯ ಸೇವಿಸಿ ಬಂದು, ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಇತ್ತೀಚೆಗೆ ಕೆಲಸಕ್ಕೂ ಹೋಗದೆ ದಿನವಿಡೀ ಮದ್ಯ ಸೇವಿಸುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಪತ್ನಿ ಉಮಾದೇವಿ, ಈ ರೀತಿ ನಡೆದುಕೊಂಡರೆ ತವರು ಮನೆಗೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ಅರವಿಂದ್ ಕುಡಿತದ ಚಟ ಬಿಟ್ಟಿರಲಿಲ್ಲ.
ತವರಿಗೆ ಹೋದರೆ ಸಾಯ್ತೇನೆ ಅಂದ: ಭಾನುವಾರ ಕೂಡ ಕಂಠಪೂರ್ತಿ ಮದ್ಯ ಸೇವಿಸಿದ್ದ ಅರವಿಂದ್, ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದವನೇ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಮನೆಯಲ್ಲಿದ್ದ ಪಾತ್ರೆ ಹಾಗೂ ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. “ನೀನು ಹೀಗೇ ಹಿಂಸೆ ಕೊಡುತ್ತಿದ್ದರೆ ನಾನು ತವರು ಮನೆಗೆ ಹೋಗುತ್ತೇನೆ,’ ಎಂದು ಪತ್ನಿ ಉಮಾದೇವಿ ಎಚ್ಚರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಅರವಿಂದ್, “ನೀನು ತವರು ಮನೆಗೆ ಹೋದರೆ ನಾನು ಸಾಯುತ್ತೇನೆ,’ ಎಂದು ಬೆದರಿಕೆ ಹಾಕಿದ್ದಾನೆ. ಇಂಥ ಬೆದರಿಕೆಗಳನ್ನು ಪ್ರತಿ ದಿನ ಕೇಳುತ್ತಿದ್ದ ಪತ್ನಿ, ಮನೆಯಿಂದ ಹೊರಬಂದು ಮೆಟ್ಟಿಲುಗಳ ಮೇಲೆ ಕುಳಿತು ಅಳಲಾರಂಭಿಸಿದ್ದಾರೆ.
ಅತ್ತ ಅಡುಗೆ ಮನೆಗೆ ಹೋದ ಅರವಿಂದ್, ಚಾಕುವಿನಿಂದ ಎದೆಗೆ ಇರಿದುಕೊಂಡು ಜೋರಾಗಿ ಕೂಗಿಕೊಂಡಿದ್ದಾನೆ. ಕೂಗು ಕೇಳಿದ ಉಮಾದೇವಿ, ಅಡುಗೆ ಮನೆಗೆ ಹೋಗಿ ನೋಡಿದಾಗ ಪತಿ ರಕ್ತದ ಮಡುವಲ್ಲಿ ಬಿದ್ದಿದ್ದ. ಕೂಡಲೆ ಸ್ಥಳೀಯರ ಸಹಾಯದಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ವೈದ್ಯರ ಸಲಹೆ ಮೇರೆಗೆ ಅರವಿಂದ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ಹುಚ್ಚು ಪ್ರೀತಿಗೆ ಮನಸೋತಳು!: ಈ ಹಿಂದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್ ಅರವಿಂದ್, ಪತ್ನಿ ಉಮಾದೇವಿಯನ್ನು 6 ವರ್ಷಗಳಿಂದ ಪ್ರೀತಿಸುತ್ತಿದ್ದ. ತನ್ನ 18ನೇ ವಯಸ್ಸಿನಲ್ಲೇ 16ರ ಹರೆಯದ ಉಮಾರ ಹಿಂದೆ ಬಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದ. ಆರಂಭದಲ್ಲಿ ಉಮಾ ನಿರಾಕರಿಸಿದಾಗ ಚಾಕುವಿನಿಂದ ಕೈ, ಎದೆ ಮೇಲೆ ಕೊಯ್ದುಕೊಂಡು ಅರವಿಂದ್, ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಈತನ ಹುಚ್ಚು ಪ್ರೀತಿಗೆ ಮನಸೋತ ಉಮಾದೇವಿ ಕಡೆಗೂ ಒಪ್ಪಿಕೊಂಡಿದ್ದರು. ನಂತರ ರೌಡಿ ಚಟುವಟಿಕೆಗಳಿಂದ ದೂರ ಉಳಿದಿದ್ದ ಅರವಿಂದ್, ಸ್ಥಳೀಯರ ಸಮ್ಮುಖದಲ್ಲಿ ಕಳೆದ ವರ್ಷ ಉಮಾದೇವಿ ಅವರನ್ನು ವಿವಾಹವಾಗಿದ್ದ.