ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಬಾಸಣವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಣಸವಾಡಿಯ ಎಚ್‌ಆರ್‌ಬಿಆರ್ ಲೇಔಟ್ ನಿವಾಸಿ ಕೆಂಚಮ್ಮ (20) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಈಕೆಯ ಪತಿ ಸಿದ್ದಪ್ಪ (25) ಎಂಬಾತನನ್ನು ಬಂಧಿಸಲಾಗಿದೆ.
ಉತ್ತರ ಕರ್ನಾಟಕ ಮೂಲದ ಸಿದ್ದಪ್ಪ ಆರು ತಿಂಗಳ ಹಿಂದಷ್ಟೇ ಕೆಂಚಮ್ಮರನ್ನು ಮದುವೆ ಯಾಗಿದ್ದು, ಎಚ್‌ಆರ್‌ಬಿಆರ್ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಿದ್ದಪ್ಪ ಗ್ಯಾಸ್ ಸಿಲಿಂಡರ್ ಡೆಲಿವರಿ ಕೆಲಸ ಮಾಡು ತ್ತಿದ್ದು, ಕೆಂಚಮ್ಮ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಮನೆಗೆ ಬಂದ ಪತಿ ಸಿದ್ದಪ್ಪ ಜತೆ ಕೆಂಚಮ್ಮ ಜಗಳ ನಡೆಸಿದ್ದಾಳೆ. ಈ ವೇಳೆ ಕೋಪಗೊಂಡ ಕೆಂಚಮ್ಮ ಪತಿಗೆ ಹೊಡೆದಿದ್ದಾಳೆ. ಅದರಿಂದ ಆಕ್ರೋಶಗೊಂಡ ಆರೋಪಿ, ಆಕೆಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ. ಕೆಲ ಹೊತ್ತಿನ ಬಳಿಕ ತನ್ನ ಸಂಬಂಧಿಕರಿಗೆ ಕರೆ ಮಾಡಿ ಪತ್ನಿ ಕೆಂಚಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ ಎಂದು ಕಥೆ ಕಟ್ಟಿ ನಾಟಕವಾಡಿದ್ದಾನೆ. ಮತ್ತೂಂದೆಡೆ ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅನುಮಾನ ವ್ಯಕ್ತವಾಗಿದೆ.
ಬಳಿಕ ಪತಿ ಸಿದ್ದಪ್ಪನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗಲೂ ಪತ್ನಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೈಡ್ರಾಮಾ ಮಾಡಿದ್ದ. ಆದರೆ, ನೇಣು ಬಿಗಿದುಕೊಂಡ ಪತ್ನಿಯ ಮೃತದೇಹವನ್ನು ಏಕೆ ಇಳಿಸಿದ್ದು ಎಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದು, ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಳು. ಹೀಗಾಗಿ ಕೊಲೆಗೈದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.