ರಬಕವಿ-ಬನಹಟ್ಟಿ: ಇಲ್ಲಿನ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿ ಮತ್ತು ಪತ್ನಿ ರಾಜಿ ಮಾಡಿಕೊಳ್ಳುವುದರ ಮೂಲಕ ಮತ್ತೆ ಒಂದಾದರು.
ನ್ಯಾಯಾಧೀಶರ ಮುಂದೆ ಪತಿ ಮತ್ತು ಪತ್ನಿ ಹೂಮಾಲೆಗಳನ್ನು ಬದಲಾಯಿಸಿಕೊಂಡರು. ವಾದಿ ಪರವಾಗಿ ಬಸವರಾಜ ಅಥಣಿ ಮತ್ತು ಪ್ರತಿವಾದಿ ಪರವಾಗಿ ಚೇತನ ಕುಂಬಾರ ವಕಾಲತ್ತು ವಹಿಸಿದ್ದರು.
ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಮಾತನಾಡಿ, ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಬಗೆ ಹರಿಸಿಕೊಂಡರೆ ಸೌಹಾರ್ದತೆಯಿಂದ ಜೀವನ ಸಾಗಿಸಬಹುದಾಗಿದೆ. ಲೋಕ ಅದಾಲತ್ ಪಕ್ಷಗಾರರಲ್ಲಿಯ ವೈಯಕ್ತಿಕ ದ್ವೇಷವನ್ನು ದೂರು ಮಾಡುವುದರ ಜೊತೆಗೆ ಪರಸ್ಪರ ಪ್ರೀತಿ ವಿಶ್ವಾಸವನ್ನು ಬೆಳೆಸುತ್ತದೆ. ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ246 ಪ್ರಕರಣಗಳಲ್ಲಿ 171 ಪ್ರಕರಣಗಳು ಇತ್ಯರ್ಥವಾದವು. ರೂ. 9,75,76,358 ಪರಿಹಾರವನ್ನು ನೀಡಲಾಯಿತು. ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ 701 ಪ್ರಕರಣಗಳಲ್ಲಿ512 ಪ್ರಕರಣಗಳು ಇತ್ಯರ್ಥಗೊಂಡಿದ್ದು, 1,96,15,062 ಪರಿಹಾರ ಮೊತ್ತವನ್ನು ನೀಡಲಾಯಿತು.
ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಷ್ಮ ಟಿ.ಸಿ. ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಅರವಿಂದ ವ್ಯಾಸ್, ಈಶ್ವರಚಂದ್ರ ಭೂತಿ, ಬಸವರಾಜ ಗುರುವ, ಕೆ.ಜಿ.ಸಾಲ್ಗುಡೆ, ರವಿ ಸಂಪಗಾವಿ, ಮಹಾಂತೇಶ ಪದಮಗೊಂಡ, ಮುಕುಂದ ಕೋಪರ್ಡೆ, ರವೀಂದ್ರ ಕಾಮಗೋಂಡ, ಕಾಡೇಶ ನ್ಯಾಮಗೌಡ ಇದ್ದರು.