Advertisement

ಸಾವಿನಲ್ಲೂ ಒಂದಾದ ದಂಪತಿ: ಮೂರು ಗಂಟೆ ಅಂತರದಲ್ಲಿ ಗಂಡ-ಹೆಂಡತಿ ಸಾವು

05:07 PM Aug 30, 2022 | Team Udayavani |

ರಬಕವಿ-ಬನಹಟ್ಟಿ : ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವದೆಂದರೆ ಸುಮ್ಮನೆಯಾ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಅನ್ನೋದು ಇದೇನಾ.

Advertisement

ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.

ಬನಹಟ್ಟಿಯ ಮಂಗಳವಾರ ಪೇಟೆ ನಿವಾಸಿ ಭೀಮಪ್ಪ ಬಾಗಲಕೋಟ(80) ಮತ್ತು ಇವರ ಪತ್ನಿ ಕಸ್ತೂರಿ ಬಾಗಲಕೋಟ(74) ಸಾವಿನಲ್ಲೂ ಒಂದಾದ ದಂಪತಿಗಳಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಪ್ಪ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ 1 ಗಂಟೆಗೆ ನಿಧನ ಹೊಂದಿದ್ದರು. ಆರೋಗ್ಯವಾಗಿಯೇ ಮನೆಯಲ್ಲಿದ್ದ ಪತ್ನಿ ಕಸ್ತೂರಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತದಿಂದ ಬೆಳಗಿನ ಜಾವ 4 ಗಂಟೆಗೆ ನಿಧನರಾದರು.

ಇಂದು ಅವರ ಮನೆಯಲ್ಲಿ ಕುಟುಂಬಸ್ಥರು ದಿವಂಗತ ದಂಪತಿಯನ್ನು ಜೋಡಿಯಾಗಿಯೇ ಕೂಡಿಸಿ ಅಂತ್ಯ ಕ್ರಿಯೆ ನಡೆಸಿದ್ದಾರೆ. ಮೃತರು 3 ಜನ ಸುಪುತ್ರಿಯರು, ಓರ್ವ ಸುಪುತ್ರ‍್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next