Advertisement

Crime: ಜಗಳ; ಪತಿಯೇ ತನ್ನ ಪತ್ನಿಗೆ ಬೆಂಕಿ ಹಚ್ಚಿ  ಕೊಲೆ

09:52 AM Aug 20, 2024 | Team Udayavani |

ನೆಲಮಂಗಲ: ಪತಿ ಹಾಗೂ ಪತ್ನಿಯ ನಡುವೆ ಜಗಳವಾಗಿ ಪತಿಯೇ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ದಾಬಸ್‌ಪೇಟೆ ಪಟ್ಟಣದ ವೀರಸಾಗರ ರಸ್ತೆಯಲ್ಲಿರುವ ರೇಣುಕಾ ಬಾರ್‌ ಸಮೀಪದ ಮನೆಯಲ್ಲಿ ಈ ಘಟನೆ ನಡೆದಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ಮಹಿಳೆ ಕಾವ್ಯ (28) ಕೊಲೆಯಾದ ಮಹಿಳೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಪುರ ಗ್ರಾಮದ ನಿವಾಸಿ ಶಿವಾನಂದ್‌ ಅಲಿಯಾಸ್‌ ದಿಲೀಪ್‌ (34) ಹತ್ಯೆಗೈದ ಆರೋಪಿ.

ಕಳೆದ ಏಳು ವರ್ಷಗಳ ಹಿಂದೆ ಕಾವ್ಯ ಹಾಗೂ ಶಿವಾನಂದ್‌ ಮದುವೆಯಾಗಿದ್ದರು. ಆರೋಪಿ ಶಿವಾನಂದ್‌ ಸೋಂಪುರ ಕೈಗಾರಿಕಾ ಪ್ರದೇಶದ ಲ್ಲಿರುವ ಟಿ.ಡಿ.ಪಿ.ಎಸ್‌ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು, ಐದು ವರ್ಷಗಳಿಂದ ಡಾಬಸ್‌ ಪೇಟೆ ಪಟ್ಟಣದಲ್ಲೇ ಗಂಡ -ಹೆಂಡತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಐದು ವರ್ಷಗಳಿಂದ ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ದ ಕಾವ್ಯ ಹಾಗೂ ಶಿವಾನಂದ್‌ ಇತ್ತೀಚೆಗಷ್ಟೇ ಕುಟುಂಬದಲ್ಲಿ ಕಲಹ ಉಂಟಾಗಿ ಆಗಾಗ ಜಗಳವಾಗುತಿತ್ತು. ಆ.17ರ ಮಧ್ಯಾಹ್ನ ಗಂಡ- ಹೆಂಡತಿ ನಡುವೆ ಜಗಳವಾಗಿ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿಯನ್ನು ಹತ್ಯೆಗೈದಿದ್ದು, ನಂತರ ಮನೆಯಲ್ಲೇ ಇದ್ದ ಬಚ್ಚಲು ಮನೆಯಲ್ಲಿ ಪೆಟ್ರೋಲ್‌ ಹಾಗೂ ಕೆಮಿಕಲ್‌ ಸುರಿದು ಬೆಂಕಿಯಿಟ್ಟು ಕೊಲೆ ಮಾಡಿದ್ದಾನೆ.

ಘಟನೆ ವಿವರ: ಆ.17ರ ಬೆಳಗ್ಗೆ ಕೊಲೆಯಾದ ಕಾವ್ಯಳ ಜೊತೆ ಆಕೆಯ ಅಕ್ಕ ಪೋನ್‌ನಲ್ಲಿ ಮಾತನಾಡಿದ್ದಾರೆ. ಮಧ್ಯಾಹ್ನ ಕಾವ್ಯಳಿಗೆ ಹಲವು ಕರೆ ಮಾಡಿದಾಗ ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ನಂತರ ಆರೋಪಿಗೆ ಕರೆಮಾಡಿ ವಿಚಾರಿಸಿದಾಗ ನಿಮ್ಮ ತಂಗಿ ನಿಮ್ಮ ಅಮ್ಮನ ಮನೆಗೆ ಹೋಗುತ್ತೇನೆಂದು ಹೇಳಿದಳು, ನಾನೇ ಬಸ್‌ ಹತ್ತಿಸಿ ಕಳುಹಿಸಿದೆ ಎಂದಿದ್ದಾನೆ. ಕಾವ್ಯ ತಾಯಿ ಮನೆಗೆ ಹೋಗದಿದ್ದಾಗ ಮತ್ತೂಮ್ಮೆ ಆರೋಪಿಗೆ ಕರೆ ಮಾಡಿದ್ದಾರೆ, ಆತನ ಮೊಬೈಲ್‌ ಸ್ವೀಚ್‌ ಆಫ್‌ ಮಾಡಿಕೊಂಡಿಕೊಂಡಿ ದ್ದರಿಂದ ಅನುಮಾನಗೊಂಡ ಕಾವ್ಯಳ ಕುಟುಂಬಸ್ಥರು ಆ.19ರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಚ್ಚಲು ಮನೆಯಲ್ಲಿ ಮೃತದೇಹ ಸುಟ್ಟು ಕರಕಲಾಗಿರುವುದು ಬೆಳಕಿಗೆ ಬಂದಿದೆ.

Advertisement

ಕಾವ್ಯಳ ಸುಟ್ಟುಕರಕಲಾಗಿರುವ ಮೃತದೇಹವನ್ನು ನೋಡಿ ಗಾಬರಿಗೊಂಡ ಮೃತಳ ಕುಟುಂಬಸ್ಥರು ತಕ್ಷಣ 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಆಕೆಯ ಪತಿಯೇ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೇಹ ಪೂರ್ಣ ಸುಟ್ಟುಕರಕಲಾಗಿದೆ. ‌

ಹತ್ಯೆಗೈದ ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆಗೊಳಿಪಡಿಸುತ್ತೇವೆ ಎಂದರು. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಗದೀಶ್‌.ಕೆ.ಎಸ್‌, ಇನ್ಸ್ ಪೆಕ್ಟರ್‌ಗಳಾದ ರಾಜು, ರಂಜನ್‌ ಕುಮಾರ್‌, ಪಿಎಸ್‌ ಐ ವಿಜಯಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next