Advertisement
ಗಣೇಶ ಚೌತಿಯ ಮರುದಿನ ಹೊಸಳ್ಳಿ, ಗೋಟಗಾರು, ಮರಡುಮನೆ, ಹಂಸಗಾರು ಭಾಗದಲ್ಲಿ ಮೇಘಸ್ಫೋಟದಂತಹ ಮಳೆ ಬಿದ್ದಿದೆ. ಅರ್ಧ ಘಂಟೆಯ ಅವಧಿಯಲ್ಲಿ ಸುಮಾರು ಮೂರು ಸೆಂ.ಮೀಗಳಷ್ಟು ಮಳೆ ಬಿದ್ದಿರುವ ಅಂದಾಜು ಮಾಡಲಾಗಿದೆ. ಈ ವೇಳೆ ಊಹಿಸಲಾಗದ ಪ್ರಮಾಣದಲ್ಲಿ ನೀರು ನುಗ್ಗಿ ಸುತ್ತಮುತ್ತಲಿನ ಕೆಲ ಮನೆಗಳು ಹಾಗೂ ಅಡಕೆ ತೋಟದಲ್ಲಿ ಹಾನಿಯಾಗಿದೆ.
Related Articles
Advertisement
ಕಳೆದ ವಾರದ ಮಳೆಗೆ ಊರಿನ ಆರಂಭದಲ್ಲಿದ್ದ ಇಂಗುಗುಂಡಿಯ ದಂಡೆ ಒಡೆದು ನೀರು ನುಗ್ಗಿದೆ. ಈ ವಿಚಾರವನ್ನು ಬರೆದು ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶಂಕರನಾರಾಯಣ ಹಿಂಡೂಮನೆ, ಇದೇ ಪ್ರಕ್ರಿಯೆ ಗುಡ್ಡದ ನೆತ್ತಿಯಲ್ಲಿ ಇರುವ ಇಂಗುಗುಂಡಿಯಲ್ಲಿ ಆದರೆ ಗುಡ್ಡವೇ ಅಲ್ಲಲ್ಲಿ ಜರಿದು ಬಂದು ತಳದಲ್ಲಿ ಇರುವ ಊರಿಗೆ ಅಪ್ಪಳಿಸಿದರೆ ನಾಳೆ ನಮ್ಮೂರು ಇನ್ನೊಂದು ಕೊಡಗು, ಮಡಿಕೇರಿ ಆದೀತು. ಈ ಆತಂಕಕ್ಕೆ ನಮ್ಮನ್ನು ಒಡ್ಡಿಕೊಂಡು ಬದುಕುವುದಕ್ಕೆ ಬದಲು ಗುಡ್ಡವನ್ನು ಗುಡ್ಡವಾಗಿಯೆ ಉಳಿಸಬೇಕು. ಮೊನ್ನೆ ಆಗಿದ್ದು ಅಪಾಯ ಅಲ್ಲ, ಬದಲು ಮುಂದಿನ ಮರಣ ಮೃದಂಗಕ್ಕೆ ಎಚ್ಚರಿಕೆ. ಈಗ ಇಂಗು ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಈ ಕಾರ್ಯಕ್ಕೆ ಎಂದಿನಂತೆ ಗ್ರಾಮಸ್ಥರು, ಅವತ್ತು ಇಂಗುಗುಂಡಿ ಮಾಡಲು ಸಹಕರಿಸಿದ ಅಕ್ಕಪಕ್ಕದ ಊರಿನ ಮತ್ತು ಸಾಗರದ ಆಸಕ್ತರನ್ನು ಈ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಲು ಕೋರುತ್ತಿದ್ದೇನೆ ಎಂದು ವಿನಂತಿಸಿದ್ದಾರೆ.
ಜಲಪತ್ರಕರ್ತರಾಗಿ ಖ್ಯಾತರಾಗಿರುವ ಶಿವಾನಂ ಕಳವೆ ಇದಕ್ಕೆ ಪ್ರತಿಕ್ರಿಯಿಸಿದ್ದು, ಬೆಟ್ಟಗಳು ಮೂಲ ಸ್ವರೂಪ ಇರೋದು ಉತ್ತಮ. ಆದರೆ ಅತಿಯಾದ ಜಾನುವಾರು ಮೇವು, ಸೊಪ್ಪು, ಮರಗಿಡ ಕಡಿತದ ಕಾರಣ ಅಲ್ಲಿನ ಪರಿಸರ ನಮ್ಮದೇ ಒತ್ತಡದಿಂದ ಬದಲಾಯಿತು. ಗುಡ್ಡದ ಭೂಮಿಯ ಫಲವತ್ತತೆ ನಾಶವಾಗಿ ಮಣ್ಣು ಕೊಚ್ಚಿ ಹೋಗಿ ನಮ್ಮ ಕೆರೆ, ಹಳ್ಳಗಳಲ್ಲಿ ಜಮಾ ಆಗಿದೆ. ಊರ ನದಿಯ ಮೊಸಳೆ ಗುಂಡಿಗಳು ಬೇಸಿಗೆಯಲ್ಲಿ ವಾಲಿಬಾಲ್ ಆಟದ ಮೈದಾನವಾಗಿದ್ದೂ ಇದೆ. ನೈಸರ್ಗಿಕವಾಗಿ ಸುರಿದ ಮಳೆ ನೀರಿನ ಶೇ. 10-12 ಭೂಮಿಗೆ ಇಂಗುವ ಕ್ರಿಯೆ ನಡೆಯುತ್ತದೆ. ನಮ್ಮ ಮಲೆನಾಡಿಗೆ ವಾರ್ಷಿಕ ಸುರಿದ ಸರಾಸರಿ ಮಳೆಯ ಪ್ರಮಾಣಕ್ಕಿಂತ ಮಳೆ ಹೇಗೆ ಹೆಚ್ಚು ದಿನ ಸುರಿಯಿತು ಎಂಬುದು ಮುಖ್ಯ. ಬಿದ್ದ ನೀರು ಉಳಿಸಲು ಭೂಮಿಗೆ ನೀರಿಂಗಿಸುವ ಕ್ರಮ ಶುರು ಆಯಿತು. ಇದರಲ್ಲಿ ಯಶೋಗಾಥೆ ಇದೆ, ಸಮಸ್ಯೆಯೂ ಇದೆ. ಆದರೆ ಇಂದು ನಮ್ಮ ನೀರಿನ ಬಳಕೆ ಹೆಚ್ಚಿದೆ. ಅಡಿಕೆ, ಬಾಳೆ, ತೆಂಗು ಮುಂತಾದ ಬೆಳೆಗಳು ಗುಡ್ಡ ಹತ್ತಿವೆ. ನೀರಿನ ಬಳಕೆ ಹೆಚ್ಚಿದ ಪರಿಣಾಮ ಈ ಸಮಸ್ಯೆ ಪರಿಹಾರಕ್ಕೆ ಇಂಗುಗುಂಡಿ, ಅರಣ್ಯೀಕರಣ, ಕೆರೆಗಳ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಈಗ ಇಂಗುಗುಂಡಿ ಮುಚ್ಚುವ ಕಾರ್ಯ ಸರಿ ಅಥವಾ ತಪ್ಪು ಎನ್ನುವ ನಿರ್ಧಾರಕ್ಕೆ ಸ್ಥಳ ವೀಕ್ಷಣೆ, ಜನರ ಅನುಭವ ಆಲಿಸಬೇಕು. ಕಾಡು ಕಲಿಯುವ ಸಂಗತಿ ಬಹಳವಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಟಿ 20 ರ‍್ಯಾಂಕಿಂಗ್;ಬಾಬರ್ ಅಜಮ್ 2ನೇ ಸ್ಥಾನಕ್ಕೆ: ಸೂರ್ಯಕುಮಾರ್ ಗೆ 4 ನೇ ಸ್ಥಾನ
ಈ ಕುರಿತಾಗಿ ಹೊಸಳ್ಳಿಯ ಇಂಗುಗುಂಡಿಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಪರಿಸರ ಕಾರ್ಯಕರ್ತ ಜಿತೇಂದ್ರ ಕಶ್ಯಪ್ ಪತ್ರಿಕೆಯೊಂದಿಗೆ ಮಾತನಾಡಿ, ಅವತ್ತಿನ ಪರಿಸ್ಥಿತಿಯಲ್ಲಿ ಇಂಗುಗುಂಡಿಗಳು ಊರಿನ ಸಂಕಷ್ಟ ಪರಿಹರಿಸಲು ನೆರವು ನೀಡುತ್ತವೆ ಎಂಬ ನಂಬಿಕೆ ಊರಿನ ಎಲ್ಲರಲ್ಲಿಯೂ ಇತ್ತು. ಆ ವೇಳೆ ನಾವು ಮಡಿಕೇರಿಯಂತಹ ಅನಾಹುತಗಳನ್ನು ನೋಡಿರಲಿಲ್ಲ. ಗುಡ್ಡದಲ್ಲಿ ಇಂಗುಗುಂಡಿ, ವನ ಸಂರಕ್ಷಣೆ ನಡೆದಿದೆಯೇ ವಿನಃ ಬೇರಾವುದೇ ರೀತಿಯ ಭೂಮಿಯ ಸ್ಥಿರತೆ ತಪ್ಪಿಸುವ ಕೆಲಸ, ಗಣಿಗಾರಿಕೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.
ಮೇಘಸ್ಫೋಟದ ಸಂದರ್ಭದಲ್ಲಿ ಇಂಗುಗುಂಡಿ ದಂಡೆ ಒಡೆದಿಲ್ಲ. ಕೋಡಿ ಹರಿದಿದೆ. ಬಹುಷಃ ಅವತ್ತು ಗುಡ್ಡದಲ್ಲಿ ಸುರಿದ ಕೋಟ್ಯಾಂತರ ಲೀಟರ್ ನೀರು ಇಂಗುಗುಂಡಿಗಳಲ್ಲಿ ತುಂಬಿ ಹರಿಯುವುದರ ಬದಲು ಒಮ್ಮೆಗೇ ಊರಿನತ್ತ ಧುಮುಕಿದ್ದರೆ ಇನ್ನಷ್ಟು ಅಪಾಯ ಆಗಬಹುದಿತ್ತು. ನಾವು ಮಾಡಿದ ಕೆಲಸ, ಆಗಬಹುದಾದ ಪರಿಣಾಮಗಳ ಕುರಿತು ವೈಜ್ಞಾನಿಕವಾದ ಅಧ್ಯಯನ ನಡೆಯಬೇಕು. ಎಂಟು ವರ್ಷಗಳಿಂದ ಇಂಗುಗುಂಡಿ ಭೂ ವ್ಯವಸ್ಥೆಗೆ ವರ್ತಿಸಿರುವ ರೀತಿಯ ವಿಶ್ಲೇಷಣೆ ನಡೆಯಬೇಕು. ಏಕಾಏಕಿ ಇಂಗುಗುಂಡಿ ಮುಚ್ಚುವ ಅಥವಾ ಇಲ್ಲಿನ ಗಿಡಮರಗಳನ್ನು ತೆಗೆಯುವ ಚಿಂತನೆ ನಮಗಿಲ್ಲ. ಈ ಹಿಂದೆ ನಮ್ಮೊಂದಿಗೆ ದುಡಿದ ಎಲ್ಲ ಪರಿಸರಾಸಕ್ತರನ್ನು ಒಳಗೊಂಡಂತೆ ಭಾನುವಾರ ಸಮಾಲೋಚನೆ ಸಭೆ ನಡೆಸಿ ತೀರ್ಮಾನ ಮಾಡಲಿದ್ದೇವೆ. ಅಗತ್ಯ ಬಿದ್ದರೆ ಇಂಗುಗುಂಡಿ ಮುಚ್ಚುವುದು ಸೇರಿದಂತೆ ಎಲ್ಲ ಆಯ್ಕೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ತಿಳಿಸಿದರು.
ಮೇಘಸ್ಫೋಟದಂತಹ ಘಟನೆಗಳು ಮಲೆನಾಡಿನಲ್ಲಿ ಆಗುತ್ತಿರುವ ಪರಿಸರ ನಾಶದಂತಹ ಘಟನೆಗಳಿಗೆ ಕಡಿವಾಣ ಹಾಕುವ ಬದಲು ಇನ್ನಷ್ಟು ಪರಿಸರದ ನಾಶಕ್ಕೇ ಕಾರಣವಾಗುವ ಸಾಧ್ಯತೆಗಳ ವಿದ್ಯಮಾನ ಪರಿಸರವಾದಿಗಳಿಗೆ ಹೊಸ ಸವಾಲುಗಳನ್ನು ತಂದಿಟ್ಟಿದೆ.