ಮೈಸೂರು: ಅರಬ್ಬಿ ಸಮುದ್ರದಲ್ಲಿ ಸಾಗರ್ ಚಂಡಮಾರುತ ಕಾಣಿಸಿಕೊಂಡಿರುವುದರಿಂದ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಕೂಡಿದ ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 23ರಿಂದ 27ರವರೆಗೆ ಮೈಸೂರು ಜಿಲ್ಲೆಯಲ್ಲಿ 10ರಿಂದ 20 ಮಿ.ಮೀವರೆಗೆ ಮಳೆಯಾಗಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ 10 ರಿಂದ 15 ಮಿ.ಮೀ, ಮಂಡ್ಯ ಜಿಲ್ಲೆಯಲ್ಲಿ 20ರಿಂದ 60 ಮಿ.ಮೀ, ಕೊಡಗು ಜಿಲ್ಲೆಯಲ್ಲಿ 20ರಿಂದ 40 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಜೂನ್ 5ರಂದು ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನವಾಗಲಿದೆ. ಈ ವರ್ಷ ರಾಜ್ಯದಲ್ಲಿ ನೈರುತ್ಯ ಮುಂಗಾರು ಸಹಜವಾಗಿದ್ದು, ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಶೇ.97 ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಪಿ.ಪ್ರಕಾಶ್ ತಿಳಿಸಿದ್ದಾರೆ.
ಗರಿಷ್ಠ ಉಷ್ಣಾಂಶ 31-33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 20-23 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ. 83-89ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ.57ರಿಂದ 68 ಇರಲಿದ್ದು, ಗಾಳಿಯು ಗಂಟೆಗೆ ಸರಾಸರಿ 8 ರಿಂದ 10 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಸಲಹೆ: ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ರೈತರು ಹಸಿರೆಲೆ ಗೊಬ್ಬರಗಳಾದ ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡುವುದು.
ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ಪ್ರತಿ ಕೆಜಿಗೆ 20 ಗ್ರಾಂ ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು. ಬಿತ್ತನೆ ಮಾಡುವಾಗ ಏಕದಳ ಧಾನ್ಯದ ಬೀಜಗಳಿಗೆ ಅಝೊàಸ್ಪಿ$ರಿಲಮ್ ಪಿಎಸ್‌ಬಿ ಹಾಗೂ ದ್ವಿದಳ ಧಾನ್ಯದ ಬೀಜಗಳಿಗೆ ರೈಝೊಬಿಯಮ್ ಪಿಎಸ್‌ಬಿಯಿಂದ ಉಪಚಾರ ಮಾಡಿ ಬಿತ್ತಬೇಕು.
ಮುಂಗಾರು ಮಳೆ ಪ್ರಾರಂಭವಾಗುವುದಕ್ಕೆ ಮೊದಲು, ಎಲ್ಲ ಜಾನುವಾರುಗಳಿಗೆ ಜಂತು ನಾಶಕ ಔಷಧಿ ಹಾಗೂ ಕಾಲು -ಬಾಯಿ ಬೇನೆ, ಚೆಪ್ಪೆ ಬೇನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಆಡು ಮತ್ತು ಕುರಿಗಳಿಗೆ ಎಂಟರೊಟಾಕ್ಸೀಮಿಯಾ ರೋಗ ನಿರೋಧಕ ಹಾಕಿಸಬೇಕು ಎಂದು ತಿಳಿಸಿದ್ದಾರೆ.