ಉಡುಪಿ: ನಾಲ್ಕೈದು ದಿನಗಳ ಹಿಂದೆ ಒಂದು, ಈಗ ಮತ್ತೂಂದು ಚಂಡಮಾರುತ ಭೀತಿ ಕರ್ನಾಟಕದ ಕರಾವಳಿಯನ್ನು ಬಲಾತ್ಕಾರದ ಮೀನುಗಾರಿಕೆ ಸ್ಥಾಗಿತ್ಯಕ್ಕೆ ಒಡ್ಡಿದೆ. ಹೀಗಾಗಿ ಸಾಮಾನ್ಯವಾಗಿ ಜೂ. 1ರಿಂದ ಜು. 31ರ ವರೆಗೆ ಒಟ್ಟು 61 ದಿನಗಳ ಇರುವ ಮೀನುಗಾರಿಕೆ ನಿಷೇಧದ ಅವಧಿ ಮತ್ತೂ ಸುಮಾರು 15 ದಿನಗಳಿಗೆ ವಿಸ್ತರಣೆಯಾದಂತಾಗಿದೆ.
ಮೀನುಗಾರಿಕಾ ಉತ್ಪನ್ನವನ್ನು ಲೆಕ್ಕ ಹಾಕುವ ವಾರ್ಷಿಕ ಅವಧಿ ಆಗಸ್ಟ್ 1ರಿಂದ ಮೇ 31. 2017-18ನೆಯ ಈ ಸಾಲಿನಲ್ಲಿ 1.4 ಲ.ಮೆ. ಟನ್ ವಾರ್ಷಿಕ ಉತ್ಪಾದನೆಯ ಗುರಿ ಇದೆ. ಮಾರ್ಚ್ ಕೊನೆಯ ವರೆಗೆ 1.28 ಲ.ಮೆ. ಟನ್ ಉತ್ಪಾದನೆಯಾಗಿದ್ದು, ಮೇ ಕೊನೆಯೊಳಗೆ ಗುರಿಗಿಂತ ಸ್ವಲ್ಪ ಕಡಿಮೆ ಉತ್ಪಾದನೆಯಾಗಬಹುದು ಎಂದು ಇಲಾಖೆ ಅಂದಾಜಿಸಿದೆ. ಹೋದ ವರ್ಷವೂ 1.3 ಲ.ಮೆ. ಟನ್ ವಾರ್ಷಿಕ ಗುರಿ ಇರಿಸಿಕೊಳ್ಳಲಾಗಿತ್ತು. ಉತ್ಪಾದನೆಯೂ ಇದಕ್ಕೆ ಸರಿಯಾಗಿ ಆಗಿತ್ತು.
ಎಚ್ಚರಿಕೆ ಕೊಟ್ಟರೂ ಮೀನುಗಾರರಿಗೆ ತೂಫಾನಿನ ಒಳಗುಟ್ಟು ಗೊತ್ತಿರುತ್ತದೆ. ಹೀಗಾಗಿ ದೊಡ್ಡ ಬೋಟುಗಳು ಮೀನುಗಾರಿಕೆಗೆ ತೆರಳುವುದೇ ಹೆಚ್ಚು. ಸಮಸ್ಯೆ ತಿಳಿಯುತ್ತಿದ್ದಂತೆ ಹೊನ್ನಾವರ, ಗೋವಾ ಇತ್ಯಾದಿ ಬಂದರುಗಳಿಗೆ ಹೋಗಿ ರಕ್ಷಣೆ ಪಡೆಯುತ್ತಾರೆ. ಈ ಬಾರಿಯೂ ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ಅದೃಷ್ಟದ ಸಾಧ್ಯತೆ!
ಈ ವರ್ಷ ಇತ್ತೀಚೆಗೆ 15 ದಿನಗಳ ಹಿಂದಿನ ವರೆಗೂ ಮೀನುಗಾರಿಕೆ ನಷ್ಟದಲ್ಲಿತ್ತು. ಕೆಲವು ಬಾರಿ ಚಂಡಮಾರುತ ಬಂದು ಕಡಲಿನಲ್ಲಿ ನೀರು ಮೇಲೆ ಕೆಳಗೆ ಆಗುವಾಗ ಮೀನು ಹೆಚ್ಚು ಸಿಗುವ ಸಾಧ್ಯತೆಯೂ ಇರುತ್ತದೆ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಡುತ್ತಾರೆ.
ಆಗಸ್ಟ್, ಸೆಪ್ಟಂಬರ್, ಮೇಯಲ್ಲಿ ನೈಸರ್ಗಿಕ ಅಡೆ ತಡೆ ಬರುತ್ತದೆ. ಮೀನುಗಾರಿಕೆ ಉತ್ಪಾದನೆ ಮೇಲೆ ದೊಡ್ಡ ಪರಿಣಾಮ ಇಲ್ಲ. ಬೋಟುಗಳ ಸಂಖ್ಯೆ ಏರಿಕೆ ಯಾಗುತ್ತದೆ. ಬೆಲೆ ಲೆಕ್ಕಾಚಾರದ ಮೇಲೆ ಡೀಸೆಲ್ ದರ ಹೆಚ್ಚಳವೂ ಪರಿಣಾಮ ಬೀರುತ್ತವೆ. ಮೀನು ಗಾರಿಕೆ ವೆಚ್ಚ ಹೆಚ್ಚಳವಾಗುವುದರಿಂದ ಲಾಭದ ಮೇಲೂ ಪರಿಣಾಮ ಇದೆ.
– ಪಾರ್ಶ್ವನಾಥ ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ