Advertisement

Hunsur : ರೈತನಿಗೆ ಶೂನಿಂದ ಥಳಿಸಲು ಮುಂದಾಗಿದ್ದ ತಂಬಾಕು ಮಂಡಳಿ ಅಧಿಕಾರಿ

08:20 PM Oct 30, 2023 | Team Udayavani |

ಹುಣಸೂರು: ತಂಬಾಕು ಮಂಡಳಿ ಅಧಿಕಾರಿಯೊಬ್ಬರು ರೈತನಿಗೆ ಶೂನಲ್ಲಿ ಹೊಡೆಯಲು ಮುಂದಾದ ಘಟನೆ ಶನಿವಾರದಂದು ಹುಣಸೂರು ತಾಲೂಕಿನ ಕೊತ್ತೆಗಾಲದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹುಣಸೂರು ತಾಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯ ಹರಾಜು ಅಧೀಕ್ಷಕ ಬ್ರಿಜ್‌ಭೂಷಣ್‌ರವರೇ ಕೊತ್ತೆಗಾಲದ ಮಂಚನಾಯಕನ ಪುತ್ರ ಕೃಷ್ಣಕುಮಾರ ಎಂಬಾತನಿಗೆ ತಂಬಾಕು ಬಾರನ್ ಲೈಸನ್ಸ್ ನವೀಕರಣ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಶೂನಲ್ಲಿ ಹೊಡೆಯಲು ಮುಂದಾದ ಅಧಿಕಾರಿ.

ಕೊತ್ತೆಗಾಲದ ಮಂಚನಾಯಕರು ತಮ್ಮ ತಂಬಾಕು ಬಾರನ್‌ನ ಲೈಸನ್ಸ್ ನವೀಕರಣಗೊಳಿಸುವ ವಿಚಾರದಲ್ಲಿ ತನ್ನ ಪುತ್ರ ಕೃಷ್ಣಕುಮಾರರೊಂದಿಗೆ ವಿವಾದವಿತ್ತು, ನವೀಕರಣಗೊಳಿಸಬಾರದೆಂದು ಕೃಷ್ಣಕುಮಾರ್ ಹರಾಜು ಅಧೀಕ್ಷಕ ಬ್ರಿಜ್‌ಭೂಷಣ್‌ರ ಮೇಲೆ ಒತ್ತಡ ಹಾಕಿದ್ದರು. ಆದರೆ ದಾಖಲಾತಿಗಳು ಕ್ರಮಬದ್ದವಾಗಿದ್ದರಿಂದ ಲೈಸನ್ಸ್ ನವೀಕರಿಸಿದ್ದರು.

ಹಲವು ಬಾರಿ ಮಾತಿನ  ಚಕಮಕಿ
ಈ ಸಂಬಂಧ ಕೃಷ್ಣಕುಮಾರ್ ಹಾಗೂ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್‌ರ ನಡುವೆ ವರ್ಷದಿಂದಲೂ ಹಲವಾರುಬಾರಿ ಮಾತಿನ ಚಕಮಕಿ ನಡೆದಿತ್ತು. ತಂದೆ ಹೆಸರಿಗೆ ನವೀಕರಿಸದಂತೆ ಅರ್ಜಿಯೂ ಸಲ್ಲಿಸಿದ್ದರು. ಶನಿವಾರದಂದು ಕೊತ್ತೆಗಾಲಕ್ಕೆ ಅಧೀಕ್ಷಕ ಬ್ರಿಜ್‌ಭೂಷಣ್ ಕಾರ್ಯ ನಿಮಿತ್ತ ಭೇಟಿ ನೀಡಿದ್ದ ವೇಳೆ ಕೃಷ್ಣಕುಮಾರ್ ಲೈಸನ್ಸ್ ನವೀಕರಣ ವಿಚಾರ ಪ್ರಸ್ತಾಪಿಸಿ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಅಧೀಕ್ಷಕ ಬ್ರಿಜ್‌ಭೂಷಣ್ ಕಾಲಲಿದ್ದ ಶೂವನ್ನು ಬಿಚ್ಚಿ ಹೊಡೆಯಲು ಮುಂದಾದಾಗ ಅಲ್ಲೇ ಇದ್ದ ಮಾಜಿ ಗ್ರಾ.ಪಂ.ಅಧ್ಯಕ್ಷ ಕರುಣಾಕರ್ ಸೇರಿದಂತೆ ಗ್ರಾಮದ ಮುಖಂಡರು ತಡೆದಿದ್ದಾರೆ. ಹಲವರು ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಧಿಕಾರಿಯ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ ಘಟನೆ ನಡೆದ ನಂತರ ಅಧೀಕ್ಷಕ ಬ್ರಿಜ್‌ಭೂಷಣ್ ಬಾರನ್ ಲೈಸನ್ಸ್ ನವೀಕರಣ ವಿಚಾರದಲ್ಲಿ ಮಂಚನಾಯಕನ ಪುತ್ರ ಕೃಷ್ಣಕುಮಾರ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ತಂದೆಯಿಂದ ಮಗನ ವಿರುದ್ದ ದೂರು
ಇತ್ತ ಕೃಷ್ಣಕುಮಾರ್ ತಂದೆ ಮಂಚನಾಯಕ ಗ್ರಾಮಾಂತರ ಪೊಲೀಸರಿಗೆ ಪುತ್ರ ಪಾನಮತ್ತನಾಗಿ ಮನೆಯಲ್ಲಿ ಬ್ಯಾರನ್ ಲೈಸನ್ಸ್ ವಿಚಾರಕ್ಕೆ ಆಗಾಗ್ಗೆ ಗಲಾಟೆ ಮಾಡುತ್ತಾನೆ, ಈತನ ಹೆಸರಿಗೆ ವರ್ಗಾವಣೆಗೊಂಡಲ್ಲಿ ನನ್ನ ಪತ್ನಿಯೂ ಅನಾರೋಗ್ಯಪೀಡಿತಳಾಗಿದ್ದು, ಇಡೀ ಕುಟುಂಬ ಬೀದಿಗೆ ಬೀಳಲಿದೆ ತಮಗೆ ರಕ್ಷಣೆ ಕೊಡುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next