ಹುಣಸೂರು: ವೇಗವಾಗಿ ಬಂದ ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಅರಣ್ಯ ವೀಕ್ಷಕನಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿರುವ ಘಟನೆ ಹೆದ್ದಾರಿಯ ಯಶೋಧ ಪುರ ಗ್ರಾಮದ ಬಳಿ ನಡೆದಿದೆ.
ಯಶೋಧರಪುರ ನಿವಾಸಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯದ ಅರಣ್ಯ ಸಿಬ್ಬಂದಿ ಚೇತನ್ ಗಾಯಗೊಂಡವರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಆತನ ಜೊತೆ ನಿಂತಿದ್ದ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೂರು ಕಡೆಯಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಚೇತನ್ ಗೆ ಡಿಕ್ಕಿ ಹೊಡೆದಿದ್ದು, ಆ ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದಿದೆ.
ಇದಿಷ್ಟೇ ಅಲ್ಲದೇ ಪಕ್ಕದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಕಾರಿನ ಮುಂಬಾಗ ಜಖಂಗೊಂಡಿದೆ.
ಯಶೋದರ ಪುರ ಗ್ರಾಮದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದ್ದು, ಗ್ರಾಮಸ್ಥರು ಭಯದಿಂದಲೇ ರಸ್ತೆ ದಾಟಬೇಕಿದೆ. ಬಸ್ ತಂಗುದಾಣದಲ್ಲಿ ನಿಲ್ಲಬೇಕಿದ್ದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಸದಸ್ಯ ಶಶಿಕುಮಾರ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.