ಹುಣಸೂರು: ನಕಲಿ ದಾಖಲಾತಿ ಸೃಷ್ಟಿಸಿ ಜಮೀನು ಮಾರಾಟ ಮಾಡಿದವರಿಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಹುಣಸೂರು ತಾಲೂಕು ಬಿ.ಆರ್. ಕಾವಲು ಗ್ರಾಮದ 4 ಎಕರೆ ಜಮೀನನ್ನು ಇಬ್ಬರು ಆರೋಪಿಗಳಾದ ರಾಜು@ಕುಂಜಚಾರಿ ಹಾಗೂ ಕುಂಜಮ್ಮ ಎಂಬವರು 1994ರಲ್ಲಿ ಡೋಮಾನಿಕ್ ರವರಿಗೆ ಸರ್ಕಾರದಿಂದ ಸಾಗುವಳಿಯಾಗಿ ವ್ಯವಸಾಯ ಮಾಡಿಸಿಕೊಂಡಿದ್ದು,ಈ ಜಮೀನನ್ನು 2010ರ ಜನವರಿ 5ರಂದು ಹುಣಸೂರು ತಾಲೂಕಿನ ಬಿ.ಆರ್.ಕಾವಲಿನ ಬಾಲನಾಗಮ್ಮ ಕೋಂ ಬಿ.ಟಿ. ಶ್ರೀನಿವಾಸೇ ಗೌಡರವರಿಗೆ ಶುದ್ದ ಕ್ರಯಕ್ಕೆ ಮಾರಾಟ ಮಾಡಿದ್ದು, ಹುಣಸೂರು ಉಪ-ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿಯಾಗಿರುತ್ತದೆ.
ಆರೋಪಿತರು ಈ ಜಮೀನ್ನನು ನೋಡಿಕೊಳ್ಳಲು ಬಂದಿದ್ದು, ತಮ್ಮದೇ ಜಮೀನು ಎಂದು ಹೇಳಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ತನ್ನ ಹೆಸರು ರಾಜು ಎಂಬುದನ್ನು ಡೋಮಾನಿಕ್ ಬಿನ್ ಸಬಾಸ್ಟೀನ್ ಎಂದು ಬದಲಾಯಿಸಿಕೊಂಡು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ 2010 ಜನವರಿ 18 ರಂದು ರಂದು ಕೆಂಪಮ್ಮ ಕೋಂ ತಿಮ್ಮೇಗೌಡರಿಗೆ ಮಾರಾಟ ಮಾಡಿ ಹುಣಸೂರು ಹಿರಿಯ ಉಪ ನೊಂದಾಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟು ಏಕೋದ್ದೇಶದಿಂದ ಮೋಸ ಮಾಡಿರುವುದಾಗಿ ಬಾಲನಾಗಮ್ಮ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಅಂದಿನ ನಗರ ಠಾಣೆ ಸಬ್‌ಇನ್ಸ್ಪೆಕ್ಟರ್ ಬಿ.ಆರ್. ಪ್ರದೀಪ್ ಪ್ರಕರಣ ದಾಖಲಿಸಿ, ತನಿಖೆ ಪೂರೈಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಹುಣಸೂರು ಪಟ್ಟಣ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಎಂ.ದೇವೇಂದ್ರ ಅವರು ಸಾಕ್ಷಿದಾರರನ್ನು ಕಾಲ-ಕಾಲಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಧಾನ ಹಿರಿಯ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶ ಶಿರಿನ ಜಾವೀದ್ ಅನ್ಸಾರಿ ಆರೋಪಿ ವಿರುದ್ದ ವಿಚಾರಣೆ ನಡೆಸಿ, ಆರೋಪಿಗಳಾದ ರಾಜು ಅಲಿಯಾಸ್ ರಾಜು, ಕೇರಳದ ಕಣ್ಣೂರು ಜಿಲ್ಲೆಯ ವೆಲ್ಲಂಪಳ್ಳಿಯ ಮೋಹನ್ ಬಿನ್ ನಂಬಿಚಾರಿ ಅಲಿಯಾಸ್ ಕುಂಚಾಚಾರಿ ಹಾಗೂ ಹುಣಸೂರು ತಾಲೂಕಿನ ಬಿ.ಆರ್.ಕಾವಲ್ ಗ್ರಾಮದ ಕುಂಜಮ್ಮ ಅಲಿಯಾಸ್ ಸರಸು ಕೋಂ ಲೇ.ವರ್ಗೀಸ್ ತಪ್ಪಿಸ್ಥರೆಂದು ನಿರ್ಧರಿಸಿ 2023 ಆಗಸ್ಟ್ 2 ರಂದು ಆರೋಪಿಗಳಿಗೆ 3 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಆರ್ಚನ ಪ್ರಸಾದ್ ವಾದ ಮಂಡಿಸಿದ್ದರು.