ಹುಣಸೂರು: ಇಲ್ಲಿನ ಜಿಟಿಟಿಸಿ ಕೇಂದ್ರ ಉದ್ಘಾಟನೆಗೆ ಆಗಮಿಸಬೇಕಿದ್ದ ಸಚಿವರನ್ನು ಬಿಜೆಪಿ ಮುಖಂಡರು ಮಹಿಳಾ ಕಾಲೇಜಿಗೆ ಕರೆದೊಯ್ದು ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡರು.
ಕಾಂಗ್ರೆಸ್ ಕಾರ್ಯಕರ್ತರ ಮುಖಂಡ ರಾಘು, ರವಿಪ್ರಸನ್ನ, ಕುಮಾರ್ ನೇತೃತ್ವದಲ್ಲಿ ಇತರ ಕಾರ್ಯಕರ್ತರು ಶಾಸಕರನ್ನು ಕರೆ ತಂದು ಕಾರ್ಯಕ್ರಮ ಮುಂದುವರೆಸುವಂತೆ ಪಟ್ಟು ಹಿಡಿದು ಬಿಜೆಪಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಲ ಹೊತ್ತು ಗೊಂದಲ ಉಂಟಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸ್ ವ್ಯಾನಿಗೆ ಹತ್ತಿಸಿದ ವೇಳೆ ಸ್ಥಳಕ್ಕಾಗಮಿಸಿದ ಡಿವೈಎಸ್ ಪಿ ರವಿಪ್ರಸಾದ್ ಆದ ಘಟನೆ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.
ನಂತರ ನಡೆದ ಜಿಟಿಟಿಸಿ ಕೇಂದ್ರ ಉದ್ಘಾಟನೆ ವೇಳೆ ಕೇಂದ್ರಕ್ಕೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇಲ್ಲಿನ ಶಾಸಕ ಮಂಜಣ್ಣನ ಶ್ರಮದಿಂದ ಜಿಟಿಟಿಸಿ ಆರಂಭವಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ತಾವು ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದರು. ಬಳಿಕ ಕೆಲ ಗೊಂದಲದಿಂದ ಬೇರೆ ಕಡೆಗೆ ಹೋಗಿದ್ದೆ. ವಿಷಯ ತಿಳಿದು ಮತ್ತೆ ವಾಪಸ್ ಬಂದಿದ್ದೇನೆ. ಶಾಸಕ ಮಂಜುನಾಥ್ ಒತ್ತಾಯದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅವರು ತಮ್ಮನ್ನೆ ಸಂಪರ್ಕಿಸಬಹುದಿತ್ತೆಂದು ಬೇಸರ ವ್ಯಕ್ತಪಡಿಸಿದರು.