Advertisement

ಗ್ಯಾರಂಟಿಗಳಿಂದ ಪ್ರಯೋಜನವಾಗಲಿ

03:37 PM Jun 25, 2023 | Team Udayavani |

ಕೆ.ಆರ್‌.ನಗರ: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೊಜನೆಗಳಿಂದ ಜನರಿಗೆ ಪ್ರಯೋಜನವಾಗಬೇಕು, ಅನಾನುಕೂಲವಾಗಬಾರದು. ಅವುಗಳನ್ನು ಜಾರಿ ಮಾಡುವಾಗ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.

Advertisement

ಪಟ್ಟಣದ ಮಾಜಿ ಸಚಿವ ದಿವಂಗತ ಎಸ್‌ .ನಂಜಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ನಂಜಪ್ಪ ಅವರ ಪತ್ನಿ ಲಲಿತಮ್ಮನಂಜಪ್ಪ ಅವರಿಂದ ಆಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಅವ್ಯವಸ್ಥೆಯಿಂದ ಕೂಡಿವೆ ಎಂದರು.

ಪೂರಕ ವ್ಯವಸ್ಥೆ ಮಾಡಿಕೊಳ್ಳಿ: ಬಡವರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಮೊದಲು ಅದಕ್ಕೆ ಅಗತ್ಯವಾದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಆದರೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳಾ ಪ್ರಯಾಣಿಕರು ಪರದಾಡುವಂತೆ ಮಾಡಿದ್ದಾರೆ. ವಿದ್ಯುತ್‌ ದರ ಹೆಚ್ಚಿಸಿ ಇತರರಿಗೆ ತೊಂದರೆ ತಂದೊಡ್ಡುತ್ತಿ ರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ನೀಡಿದ್ದ ಭರವಸೆ ಈಡೇರಿಸುವೆ: ನಮ್ಮ ತಂದೆ ಮತ್ತು ನನ್ನನ್ನು ಏಕಕಾಲದಲ್ಲಿ ವಿಧಾನಸಭೆಗೆ ಶಾಸಕರನ್ನಾಗಿ ಆಯ್ಕೆ ಮಾಡಿ ಕಳುಹಿಸಿದ ಚಾಮುಂಡೇಶ್ವರಿ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರಗಳ ಮತದಾರರು ಹಾಗೂ ನಮ್ಮ ಪಕ್ಷದ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.

ತಳಮಟ್ಟದಿಂದ ಪಕ್ಷ ಸಂಘಟಿಸಿ: ಜಿಲ್ಲೆಯಲ್ಲಿ ನಮ್ಮ ಜೆಡಿಎಸ್‌ ಪಕ್ಷದ ಹಲವಾರು ಮಂದಿ ಶಾಸಕರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಕೂಡ ಧೃತಿಗೆಡದೆ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಪರವಾಗಿ ನಿರಂತರವಾದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಇದೊಂದು ಸೌಜನ್ಯಯುತವಾದ ಭೇಟಿ: ಇದೊಂದು ಸೌಜನ್ಯಯುತವಾದ ಭೇಟಿಯಾಗಿದ್ದು, ನಮ್ಮ ಭಾಗದಲ್ಲಿ ಪಕ್ಷದ ಹಿರಿಯ ರಾಜಕಾರಣಿಗಳಾದ ಮಾಜಿ ಸಚಿವರಾಗಿದ್ದ ದಿವಂಗತ ಎಸ್‌.ನಂಜಪ್ಪನವರ ಪತ್ನಿ ಲಲಿತಮ್ಮ ಅವರ ಆಶೀರ್ವಾದ ಪಡೆದು ಕುಟುಂಬದವರ ಕುಶಲೋಪರಿ ವಿಚಾರಿಸಲು ಇಂದು ಭೇಟಿ ನೀಡಿದ್ದೇನೆ ಎಂದು ಸಮರ್ಥನೆ ನೀಡಿದರು.

ಮೈಮುಲ್‌ನ ಅಧ್ಯಕ್ಷ ಪ್ರಸನ್ನ ಮಾತನಾಡಿ, ಕರ್ನಾಟಕ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭೀಮನಾಯಕ್‌ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನೂತನ ಅಧ್ಯಕ್ಷರು ಮತ್ತು ಸಹಕಾರ ಸಚಿವರು ಹಾಲಿನ ದರ ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದು, ರೈತರಿಗೆ ಹೆಚ್ಚಿನ ದರ ನೀಡಬೇಕೆಂಬುದೇ ನಮ್ಮೆಲ್ಲರ ಉದ್ದೇಶವೂ ಆಗಿದೆ. ನಾವು ಮೈಸೂರು ಭಾಗದಲ್ಲಿ ಹಾಲಿನ ದರ ಹೆಚ್ಚಿಸಿಕೊಂಡು ಬಂದಿದ್ದೇವೆಯೇ ವಿನಹಃ ಕಡಿಮೆ ಮಾಡಿಲ್ಲ. ಇದರಿಂದ ರೈತರಿಗೆ ಅನುಕೂಲ ವಾಗಲಿದೆ. ಹಾಲು ಉತ್ಪಾದಕ ರೈತರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಎಸ್‌.ನಂಜಪ್ಪನವರ ಪತ್ನಿ ಲಲಿತಮ್ಮನಂಜಪ್ಪ, ಹಿರಿಯ ಪುತ್ರ ಕೆ.ಎನ್‌ .ದಿನೇಶ್‌, ಜೆಡಿಎಸ್‌ ವಕ್ತಾರ ಕೆ.ಎಲ್‌. ರಮೇಶ್‌, ಸಾಲಿಗ್ರಾಮ ತಾಲೂಕು ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿಪ್ರಸನ್ನ, ಮೈಮುಲ್‌ನ ನಿರ್ದೇಶಕ ಎ.ಟಿ.ಸೋಮಶೇಖರ್‌, ಪುರಸಭೆ ಸದಸ್ಯರಾದ ಕೆ.ಎಲ್‌. ಜಗದೀಶ್‌, ಸಂತೋಷ್‌ಗೌಡ, ಮಾಜಿ ಸದಸ್ಯ ಸೈಯದ್‌ಅಸ್ಲಾಂ, ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್‌. ಹರಿಚಿದಂಬರ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿಸೋಮಶೇಖರ್‌, ಮುಖಂಡರಾದ ಬೆಣಗನಹಳ್ಳಿಕೃಷ್ಣೇಗೌಡ, ಡೈರಿಪ್ರಕಾಶ್‌, ರಂಗನಾಥ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next