ಹುಣಸೂರು: ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸರೊಂದಿಗೆ ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಹಬ್ಬಗಳನ್ನು ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್. ಚೇತನ್ ಸೂಚಿಸಿದರು.
ಹುಣಸೂರು ನಗರ ಠಾಣೆಯಲ್ಲಿ ಈದ್-ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಅವರು ಮದ್ಯಾಹ್ನ ಆರಂಭವಾಗುವ ಮಿಲಾದ್ ಮೆರವಣಿಗೆಯು ಸಂಜೆ ಮುಕ್ತಾಯವಾಗಿ ರಾತ್ರಿ 10ರೊಳಗೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು. ರಾತ್ರಿ ವೇಳೆ ಧ್ವನಿವರ್ಧಕ ಬಳಸಲು ಅವಕಾಶವಿರುವುದಿಲ್ಲ ಎಂದರು.
ಮಿಲಾದ್ ಮೆರವಣಿಗೆ ವೇಳೆ ಮುಖಂಡರು ಜವಾಬ್ದಾರಿ ವಹಿಸಿ, ಯುವಕರನ್ನು ಗಮನಿಸಬೇಕು. ವ್ಯಾಟ್ಸ್ ಆಪ್ ಗಳಲ್ಲಿ ಬರುವ ಇಲ್ಲ ಸಲ್ಲದ ಮಾಹಿತಿಗಳನ್ನು ಶೇರ್ ಮಾಡುವುದು, ಪ್ರಚೋದನೆ ಮಾಡುವವರ ವಿರುದ್ದ ಶಿಸ್ತು ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು.
ಈದ್-ಮಿಲಾದ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಮಿಲಾದ್ ಸಮಿತಿಯ ಅಧ್ಯಕ್ಷ ಸರದಾರ್ ಹಾಗೂ ಜಿ.ಪಂ. ಮಾಜಿ ಸದಸ್ಯ ಫಜಲುಲ್ಲಾ, ಮದ್ಯಾಹ್ನ 2.30ಕ್ಕೆ ಶಬ್ಬೀರ್ ನಗರದ ಶಾಹಿ ಮಸೀದಿಯಿಂದ ಆರಂಭವಾಗುವ ಮೆರವಣಿಗೆಯು ಕಲ್ಪತರು ವೃತ್ತ, ಅಕ್ಷಯ ಬಂಢಾರ್, ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆ, ಎಚ್.ಡಿ.ಕೋಟೆ ವೃತ್ತ, ಎಸ್.ಜೆ.ರಸ್ತೆ, ಸಂವಿಧಾನ ವೃತ್ತದ ಮೂಲಕ ಈದ್ಗಾ ಮೈದಾನಕ್ಕೆ ಮೆರವಣಿಗೆ ಆಗಮಿಸಲಿದೆ. ಅಲ್ಲಿ ಉಪಹಾರ ವಿತರಣೆ ನಂತರ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಹಬ್ಬಕ್ಕಾಗಿ ಮುಖಂಡರ ಸಮಿತಿ ರಚಿಸಿಕೊಂಡಿದ್ದು, ಲೋಪವಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಡಿವೈ.ಎಸ್.ಪಿ.ರವಿಪ್ರಸಾದ್, ಇನ್ಸ್ಪೆಕ್ಟರ್ ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಅಯೂಬ್‌ಖಾನ್, ಬಷೀರ್‌ಅಹಮದ್, ಮಜಾಜ್‌ಅಹಮದ್ ಸೇರಿದಂತೆ ಮಿಲಾದ್ ಆಚರಣಾ ಸಮಿತಿಯ ಸದಸ್ಯರಿದ್ದರು.