Advertisement

Hunsur: ವಿರಾಟ್ ಯೋಗಿ ಗೊಮ್ಮಟೇಶ್ವರನಿಗೆ 74 ನೇ ಮಹಾಮಸ್ತಕಾಭಿಷೇಕ ಸಂಭ್ರಮ

09:20 PM Nov 26, 2023 | Team Udayavani |

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿ ವೀರಾಜಮಾನವಾಗಿರುವ ಗೊಮ್ಮಟೇಶ್ವರಸ್ವಾಮಿಯ 74ನೇ ವರ್ಷದ ಮಹಾ ಮಸ್ತಕಾಭಿಷೇಕ ಭಕ್ತರ ಉದ್ಘೋಷಗಳ ನಡುವೆ ನಡೆಯಿತು.

Advertisement

ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಜೈನ ಮಠದ ಭುವನಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಂಡ್ಯ ಜಿಲ್ಲೆಯ ಆರತಿಪುರದ ಜೈನಮಠದ ಸಿದ್ದಾಂತ ಕೀರ್ತಿ ಭಟ್ಟಾರಕಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮರೂರು ಜೈನಮಠದ ಧರ್ಮಸೇನಾ ಸ್ವಾಮೀಜಿಗಳ ಸಾನಿಧ್ಯದಲ್ಲಿ  ಮಹಾ ಮಸ್ತಕಾಭಿಷೇಕ ಜರುಗಿತು.

ಜೈನರ ಸಮುದಾಯ ಭವನದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನಂತರ ವಿರಾಜಮಾನವಾಗಿ ನಿಂತಿರುವ ಬೆಟ್ಟದ ಮೇಲಿನ 18 ಅಡಿ ಎತ್ತರದ  ಬಾಹುಬಲಿ ಮೂರ್ತಿಗೆ ಭಕ್ತರು ಹರಾಜಿನಲ್ಲಿ ಕೊಂಡ ಕಳಸಗಳನ್ನು ತಲೆಯ ಮೇಲೆ ಹೊತ್ತುತಂದು ಅಭಿಷೇಕ ನೆರವೇರಿಸಿದರು.

ಮೊದಲಿಗೆ ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅಷ್ಟಗಂಧ, ಅರಳು, ಸಕ್ಕರೆಪುಡಿ, ಅಕ್ಕಿಹಿಟ್ಟು, ಜೇನುತುಪ್ಪ, ಶ್ರೀಗಂಧ, ವಿವಿಧ ಕಷಾಯಾಭಿಷೇಕ, ನಂತರ ಪುಷ್ಪಾರ್ಚನೆ ನಡೆಸಲಾಯಿತು. ವಿರಾಗ ಮೂರ್ತಿ ಬಣ್ಣಬಣ್ಣಗಳಿಂದ ಕಂಗೊಳಿಸಿದ, ಪ್ರತಿ ಅಭಿಷೇಕದಲ್ಲೂ ಗೊಮ್ಮಟನನ್ನು ಕಣ್ತುಂಬಿಕೊಂಡ ಭಕ್ತರು ವಿರಾಟ್ ಯೋಗಿ ಕೀ ಜೈ, ಬಾಹುಬಲಿ ಮಹಾರಾಜ್ ಕೀ ಜೈ ಎನ್ನುತ್ತಾ ಜಯಘೋಷ ಮೊಳಗಿಸಿದರು.

ರಾಜ್ಯದ ವಿವಿಧೆಡೆಗಳಿಂದ ಜೈನ ಸಮುದಾಯದ ಮಂದಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಗ್ರಾಮಸ್ಥರು ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳೆನ್ನದೆ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

Advertisement

ಈ ಬಾರಿ ಗೊಮ್ಮಟಗಿರಿ ಕ್ಷೇತ್ರದ ಸೇವಾಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಮನ್ಮಥರಾಜ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಮಸ್ತಕಾಭಿಷೇಕ ಜರುಗಿತು. ಆನಂತರ ಸ್ವಾಮಿಜಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಆವರಣದಲ್ಲಿ ನಿರ್ಮಿಸಿರುವ ಹೊಸ ವಿಶ್ರಾಂತಿ ಗೃಹ, ಶೌಚಾಲಯ ಕಟ್ಟಡಗಳನ್ನು ಪೂಜ್ಯರು ಉಧ್ಘಾಟಿಸಿದರು. ಹಾಗೂ 1.5ಕೋಟಿ ರೂ. ವೆಚ್ಚದ ಸಮುದಾಯ ಭವನ,ಯಾತ್ರಿನಿವಾಸ್ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಸಾದ ವಿತರಣೆ: ಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತಾಧಿಗಳಿಗೆ ಅನೇಕ ದಾನಿಗಳು ಅನ್ನಸಂತರ್ಪಣೆ ನಡೆಸಿಕೊಟ್ಟರು, ಬಿಳಿಕೆರೆ ಇನ್ಸ್ಪೆಕ್ಟರ್ ಲೋಲಾಕ್ಷಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಸಾಲೆ ಪುರಿಯ ವೈಶಿಷ್ಟ್ಯ
ಮಸ್ತಕಾಭಿಷೇಕ ಅಂಗವಾಗಿ ನಡೆದ ಮಹೋತ್ಸವದಲ್ಲಿ ಬಗೆಬಗೆಯ ಮಸಾಲೆಪುರಿ ಮಾರಾಟ ಭರ್ಜರಿಯಾಗಿತ್ತು. ಭಕ್ತರು ಮುಗಿ ಬಿದ್ದು ಖರೀದಿಸಿದರು, ಸಿಹಿತಿಂಡಿ ಅಂಗಡಿ, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next