ಹುಣಸೂರು: ತಾಲೂಕಿನ ಕಿರಂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಳಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಅಸಮರ್ಪಕ ನಿರ್ವಹಣೆಯಿಂದ ಬೇಸತ್ತ ಗ್ರಾಮಸ್ಥರು, ಪಿಡಿಓ ಸಮ್ಮುಖದಲ್ಲಿ ಬೀಗ ಜಡಿದು ಆಕ್ರೋಶ ಹೊರಹಾಕಿದರು.
ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದ ಹಿನ್ನೆಲೆಯಲ್ಲಿ ಗುರುವಾರ ಎಸಿಡಿಪಿಓ ವೀಣಾ ಹಾಗೂ ಮೇಲ್ವಿಚಾರಕಿ ಸುಮಂಗಲಿ ಭೇಟಿ ಇತ್ತು ಗ್ರಾಮಸ್ಥರ ಸಭೆ ನಡೆಸಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಅಣ್ಣಯ್ಯ, ಸದಸ್ಯ ಹರೀಶ್‌ಗೌಡ ಸೇರಿದಂತೆ ಮುಖಂಡರಾದ ಮಹದೇವು, ಗೌರಮ್ಮ, ಈರೇಗೌಡ, ಮಹದೇವಿ ಮತ್ತಿತರರು ಅಂಗನವಾಡಿ ಕಾರ್ಯಕರ್ತೆ ಸುಜಾತಾಬಾಯಿ ಕೇಂದ್ರವನ್ನು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಆದಿವಾಸಿ ಮಕ್ಕಳನ್ನು ಕೀಳಾಗಿ ಕಾಣುತ್ತಾರೆ. ದೂರ ಕೂರಿಸುತ್ತಾರೆ. ಸರಿಯಾಗಿ ಪಡಿತರ ವಿತರಿಸುವುದಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ಗೆ ಹಾಗೂ ಸಿಡಿಪಿಒಗೆ ದೂರು ನೀಡಿದ್ದೆವು. ಪಿಡಿಒ ಭವ್ಯ ಸಹ ಅನೇಕ ಬಾರಿ ತಿಳುವಳಿಕೆ ನೀಡಿದ್ದರು. ಗ್ರಾಮಸ್ಥರು ಎಷ್ಟೇ ಎಚ್ಚರಿಸಿದ್ದರೂ ಪ್ರಯೋಜನವಾಗದೆ ಗ್ರಾಮಸ್ಥರು ಸೇರಿ ಬೀಗ ಹಾಕಿದ್ದೇವೆಂದು ಹೇಳಿ, ಈ ಕೇಂದ್ರಕ್ಕೆ ಬದಲಿ ಶಿಕ್ಷಕಿ ನೇಮಿಸಿರೆಂದು ಪಟ್ಟು ಹಿಡಿದರು.
ಅಂಗನವಾಡಿ ಶಿಕ್ಷಕಿ ಸುಜಾತಾಬಾಯಿ ಕೇಂದ್ರದ ಸಹಾಯಕಿ ಅನಾರೋಗ್ಯದಿಂದ ಬರುತ್ತಿಲ್ಲ. ಒಬ್ಬರಿಂದ ನಿರ್ವಹಣೆ ಸಾದ್ಯವಿಲ್ಲ. ನನ್ನಿಂದ ತಪ್ಪಾಗಿದ್ದು, ಮುಂದೆ ಸರಿಪಡಿಸಿಕೊಂಡು ಹೋಗುವೆನೆಂಬ ಭರವಸೆ ಮೇರೆಗೆ ಗ್ರಾಮಸ್ಥರು ಒಪ್ಪಿ ಇವರನ್ನೇ ಮುಂದುವರೆಸುವುದು. ಮುಂದೆ ಇದೇ ರೀತಿ ನಡೆದುಕೊಂಡಲ್ಲಿ ಇವರ ವಿರುದ್ದ ಕ್ರಮವಹಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಮೇರೆಗೆ ಅಂಗನವಾಡಿ ತೆರೆಯಲು ಅವಕಾಶ ಮಾಡಿಕೊಟ್ಟರು.
ಇಂದು ಸಿಡಿಪಿಒ ಭೇಟಿ:
ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವ ಬಗ್ಗೆ ಪಿಡಿಓರಿಂದ ಮಾಹಿತಿ ಬಂದಿದೆ. ನಾನು ರಜೆಯಲ್ಲಿದ್ದೇನೆ. ಗ್ರಾಮಕ್ಕೆ ಎಸಿಡಿಪಿಓ ಹಾಗೂ ಮೇಲ್ವಿಚಾರಕಿ ಭೇಟಿ ನೀಡಿ ಪರಿಶೀಲಿಸಿ, ಗ್ರಾಮಸ್ಥರ ಸಭೆ ನಡೆಸಿದ್ದಾರೆ. ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡುವೆನೆಂದು ಸಿಡಿಪಿಒ ಹರೀಶ್ ತಿಳಿಸಿದ್ದಾರೆ.