Advertisement

ಹುಣಸೂರು: ಹನುಮ ಜಯಂತಿಯ ಶೋಭಾಯಾತ್ರೆ: 15 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

10:47 PM Dec 07, 2022 | Team Udayavani |

ಹುಣಸೂರು: ನಗರದಲ್ಲಿ 2015 ರಲ್ಲಿ ಕೆಲ ಅಹಿತಕರ ಘಟನೆಗಳಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಬುಧವಾರ ನಡೆದ ಹನುಮ ಜಯಂತಿಯ ಶೋಭಾಯಾತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಸಾಗಿ ಬಂದರು.

Advertisement

ಕಳೆದ ಮೂರುವರ್ಷಗಳಿಂದ ಕೋವಿಡ್ ನಿಂದಾಗಿ ಸರಳವಾಗಿ ಆಚರಿಸಲಾಗಿತ್ತು. ಇದೀಗ ಕೆಲ ಪ್ರಮುಖ ರಸ್ತೆಗಳ ನಿರ್ಭಂಧ ತೆರವಿನಿಂದಾಗಿ ಈ ಬಾರಿ ಹನುಮಂತೋತ್ಸವ ಕಳೆಕಟ್ಟಿತ್ತು.

ರಂಗನಾಥ ಬಡಾವಣೆಯಿಂದ ಬೆಳಗ್ಗೆ 11 ಕ್ಕೆ ಹೊರಟ ಹನುಮ ಭಕ್ತರ ಶೋಭಾಯಾತ್ರೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಉಪವಿಭಾಗಾಧಿಕಾರಿ ರುಚಿಬಿಂದಾಲ್, ಡಿವೈಎಸ್‌ಪಿ ರವಿಪ್ರಸಾದ್, ಪೌರಾಯುಕ್ತೆ ಮಾನಸ, ತಾ.ಪಂ.ಇಓ ಮನು, ತಹಸೀಲ್ದಾರ್ ಡಾ.ಅಶೋಕ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಗೌರವಾಧ್ಯಕ್ಷ ಯೋಗಾನಂದಕುಮಾರ್, ಉಪಾಧ್ಯಕ್ಷ ಎಚ್.ವೈ.ಮಹದೇವ್, ಸಮಿತಿಯ ಅನಿಲ್ ಸೇರಿದಂತೆ ಗಣ್ಯರು ಸಾಗಿ ಬಂದರು.

ಮೆರವಣಿಗೆಯಲ್ಲಿ ಹನುಮನ ಝೇಂಕಾರ
ಮೆರವಣಿಯುದ್ದಕ್ಕೂ ಕೇಸರಿ ರುಮಾಲು, ಜುಬ್ಬಾ ಧರಿಸಿದ್ದ, ಶಾಲು ಹೊದ್ದಿದ್ದ, ಕೈಯಲ್ಲಿ ಕೇಸರಿ ಬಾವುಟ ಹಿಡಿದ ಹನುಮಭಕ್ತರು ಕೇಸರಿಮಯಗೊಳಿಸಿ ಇಡೀ ಮೆರವಣಿಗೆ ಕೇಸರಿಯ ರಂಗೇರಿಸಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹನುಮಭಕ್ತರು ಶ್ರೀರಾಂಕೀ ಜೈ, ಹನುಮಾನ್‌ಕೀ ಜೈ ಎಂದು ಘೋಷಣೆ ಕೂಗುತ್ತಾ, ವಾದ್ಯ, ತಮಟೆ, ನಗಾರಿ ಹಾಗೂ ಡಿ.ಜೆ. ಸದ್ದಿಗೆ ಯುವ ಪಡೆ ಕುಣಿದು ಕುಪ್ಪಳಿಸಿದರು. ಅದರಲ್ಲೂ ಯುವತಿಯರ ತಂಡ ನವಿರಾದ ನೃತ್ಯ ಮಾಡಿ ಸಂಭ್ರಮಿಸಿದರು.

2 ಕಿ.ಮೀ.ಉದ್ದದ ಮೆರವಣಿಗೆ
ಮೆರವಣಿಗೆ ಆರಂಭವಾಗುತ್ತಿದ್ದಂತೆ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು, ರಸ್ತೆಯ ಇಕ್ಕೆಲ್ಲಗಳಲ್ಲಿ ಹಾಗೂ ಮನೆಯಮಹಡಿ, ತಾರಸಿಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿದರು. ಅಲ್ಲಲ್ಲಿ ಹನುಮನಿಗೆ ಪೂಜೆ ಸಹ ಮಾಡಿಸಿದರು.
ಯುವ ಪಡೆಯ ಕುಣಿತದ ಉತ್ಸಾಹದಿಂದ ಪ್ರೇರೇಪಿತರಾದ ಶಾಸಕ ಎಚ್.ಪಿ.ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿಯವರು ಸಹ ಯುವ ಪಡೆಯೊಂದಿಗೆ ಕುಣಿದು ಕುಪ್ಪಳಿಸಿದರು.

Advertisement

ಪ್ರಸಾದ ವಿನಿಯೋಗ
ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಹತ್ತಾರು ಕಡೆ ಬಾತ್, ಮೊಸರನ್ನ, ಮಜ್ಜಿಗೆ, ಪಾನಕಗಳನ್ನು ನೀಡಿ ಬಿಸಿಲಿನ ಝಳಕ್ಕೆ ಬಳಲಿದ್ದ ಹನುಮಭಕ್ತರಿಗೆ ವಿತರಿಸಿದರು.

ಪೊಲೀಸರ ಸರ್ಪಗಾವಲು
ಹಿಂದಿನ ಘಟನೆಗಳನ್ನಾಧರಿಸಿ ಈಬಾರಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ದಕ್ಷಿಣವಲಯ ಐ.ಜಿ.ಪಿ. ಪವಾರ್ ಎಸ್.ಪಿ ಚೇತನ್‌ರ ಮಾರ್ಗದರ್ಶನದಲ್ಲಿ ಪೋಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಲ್ಲದೆ, ಮೆರವಣಿಗೆಯು ಯಶಸ್ವಿಯಾಗಿಸಲು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಬಹುತೇಕ ಕಡೆ ಬ್ಯಾರಿಕೇಡ್ ಅಳವಡಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸರ್ಪಗಾವಲಿನಲ್ಲಿ ಮೆರವಣಿಗೆ ನಡೆಯುವಂತೆ ನೋಡಿಕೊಂಡರಲ್ಲದೆ ಶಾಂತಿಯುತವಾಗಿ ನಡೆದಿದ್ದರಿಂದ ನಿಟ್ಟುಸಿರುಬಿಟ್ಟರು.

ಎಸ್.ಪಿ.ಚೇತನ್ ನೇತೃತ್ವ
ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆಯಲ್ಲಿ ಮೆರವಣಿಗೆ ಸಾಗುವ ವೇಳೆ ಎಸ್.ಪಿ. ಚೇತನ್ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್.ಪಿ.ನಂದಿನಿ, ಡಿವೈಎಸ್‌ಪಿ ರವಿಪ್ರಸಾದ್‌ರವರು ನೇತೃತ್ವದಲ್ಲಿ ಈ ಎರಡೂ ರಸ್ತೆಗಳಲ್ಲಿ ಮೆರವಣಿಗೆಯು ಸಾಂಗವಾಗಿ ನಡೆಯಲು ಅವಕಾಶ ಕಲ್ಪಿಸಿದರು. ಮೆರವಣಿಗೆಯು ಕಲ್ಕುಣಿಕೆ ಸರ್ಕಲ್, ಶಬರಿಪ್ರಸಾದ್‌ವೃತ್ತ, ಸಂವಿದಾನಸರ್ಕಲ್, ಎಸ್.ಜೆ.ರಸ್ತೆ, ಎಚ್.ಡಿ.ಕೋಟೆವೃತ್ತ, ಜೆ.ಎಲ್.ಬಿ.ರಸ್ತೆ, ಲಕ್ಷಿö್ಮವಿಲಾಸ್‌ವೃತ್ತ, ಬಜಾರ್‌ರಸ್ತೆ, ಬಸ್‌ನಿಲ್ದಾಣದ ರಸ್ತೆ, ಕಲ್ಪತರುಸರ್ಕಲ್ ಮೂಲಕ ಮೈಸೂರು ರಸ್ತೆಯ ಆಂಜನೇಯಸ್ವಾಮಿ ದೇವಾಲಯದ ಬಳಿ ಸಂಜೆ ೫.೩೦ರ ವೇಳೆಗೆ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಮೇಳೈಸಿದ ರಾಜಕಾರಣ
ಹನುಮಂತೋತ್ಸವ ಸಮಿತಿಯು ಎಷ್ಟೇ ಮನವಿ ಮಾಡಿಕೊಂಡಿದ್ದರೂ ಸಹ ಶಾಸಕ ಮಂಜುನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡ, ಬಿಜೆಪಿ ನಗರ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿಯರನ್ನು ಮೆರವಣಿಗೆಯಲ್ಲಿ ಅವರ ಅಭಿಮಾನಿಗಳು ಹೆಗಲಮೇಲೆ ಹೊತ್ತು ಕುಣಿದು ಕುಪ್ಪಳಿಸಿ, ಜೈಕಾರ ಹಾಕುವ ಹಾಗೂ ಫ್ಲೆಕ್ಸ್ ಅಳವಡಿಕೆಗೆ ಹಾಕಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಎಲ್ಲಡೆ ಅಳವಡಿಸುವ ಮೂಲಕ ಜಿಲ್ಲಾಡಳಿತದ ನಿರ್ದೇಶನವನ್ನೇ ಧಿಕ್ಕರಿಸಿ ಎಂದಿನಂತೆ ದೇವರ ಕಾರ್ಯದಲ್ಲೂ ರಾಜಕಾರಣ ಮೇಳೈಸಿದ್ದು ವಿಪರ್ಯಾಸ !.

ಜಾಕೀರ್‌ಹುಸೇನ್ ದೇವಿಪ್ರಸಾದ್ ಬಳಿ, ರಿಜ್ವಾನ್ ಪೊಲೀಸ್ ಠಾಣೆ ಎದುರು ಹಾಗೂ ಯುವ ಮುಖಂಡ ಫಜಲ್ ಮತ್ತವರ ಸ್ನೇಹಿತರು ಬಜಾರ್ ರಸ್ತೆಯಲ್ಲಿ ಹನುಮಭಕ್ತರಿಗೆ ಹೂ, ಮಜ್ಜಿಗೆ, ಹಣ್ಣು ನೀಡಿ ಶುಭ ಹಾರೈಸಿ ಸೌಹಾರ್ದತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next