Advertisement

Hunsur: ತಾಯಿಯೊಂದಿಗೆ ನಾಲ್ಕು ಚಿರತೆ ಮರಿಗಳು ಪ್ರತ್ಯಕ್ಷ; ಆತಂಕದಲ್ಲಿ ಜನತೆ

11:12 AM Aug 04, 2024 | Team Udayavani |

ಹುಣಸೂರು: ತಾಲೂಕಿನ ನಂಜಾಪುರ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಹಾಗೂ ಕಾಡು ಹಂದಿಗಳ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ಹಾಗೂ  ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.

Advertisement

ಬಿಳಿಕೆರೆ ಹೋಬಳಿಯ ನಂಜಾಪುರ, ಗೌರಿಪುರ, ಧರ್ಮಾಪುರದ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ಶಾಲೆ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ತಾಯಿ ಚಿರತೆಯೊಂದಿಗೆ ನಾಲ್ಕು ಮರಿಗಳು ಕಾಣಿಸಿಕೊಳ್ಳುತ್ತಿದ್ದು, ಹಗಲು ವೇಳೆಯೇ ಕಾಣಿಸಿಕೊಳ್ಳುತ್ತಿದೆ.

ಚಿರತೆ ಈಗಾಗಲೇ ಹಲವಾರು ನಾಯಿಗಳನ್ನು ಕೊಂದು ಹಾಕಿದ್ದು, ಮಾತ್ರವಲ್ಲದೇ ಜಾನುವಾರುಗಳ ಮೇಲೆ ದಾಳಿ ನಡೆಸಿವೆ. ಧರ್ಮಾಪುರದ ವಸತಿ ಶಾಲೆಗಳ ಸುತ್ತ- ಮುತ್ತ ಓಡಾಡುತ್ತಿರುವುದು ಕಂಡು ಬಂದಿದೆ.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡುವಂತಾಗಿದೆ. ಚಿರತೆಗಳು ರಾತ್ರಿ ವೇಳೆ ರಸ್ತೆಯಲ್ಲೇ ಸಂಚರಿಸುತ್ತಿರುವುದು ದ್ವಿಚಕ್ರ ವಾಹನ ಸವಾರರಿಗೆ ಓಡಾಡದಂತಾಗಿದೆ. ರೈತರು ಜಮೀನಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಕಾಡು ಹಂದಿಗಳ ಕಾಟ:

ನಂಜಾಪುರ ಗ್ರಾಮದ ಪಕ್ಕದಲ್ಲೇ ಕುರುಚಲು ಕಾಡಿದ್ದು, ಇಲ್ಲಿ ಹಂದಿ ಹಾಗೂ ಚಿರತೆಗಳು ಆವಾಸ ಸ್ಥಾನ ಮಾಡಿಕೊಂಡಿದ್ದು, ಕಾಡು ಹಂದಿಗಳಂತೂ ಮುಸುಕಿನ ಜೋಳದ ಬಿತ್ತನೆ ಸಮಯದಲ್ಲೇ ಸಾಲು ಹಿಡಿದು ಬಿತ್ತನೆ ಬೀಜವನ್ನೇ ತಿಂದು ಹಾಕುತ್ತಿದ್ದವು.

ಇದೀಗ ಜೋಳದ ಬೆಳೆ ಬಂದಿದ್ದು, ಕಾಡು ಹಂದಿಗಳ ಹಿಂಡು ಹೊಲಕ್ಕೆ ದಾಳಿ ಇಟ್ಟು ಜೋಳದ ಮೋತೆಯನ್ನೇ ತಿಂದು ಹಾಕುತ್ತಿವೆ. ಇದರಿಂದ ನಷ್ಟಕ್ಕೊಳಗಾಗಿರುವ ರೈತರು ಪೂರ್ಣ ಕಾಳು ಕಟ್ಟುವ ಮುನ್ನವೇ ಜೋಳದ ಗಿಡ ಸಮೇತ ಮಾರಾಟ ಮಾಡುತ್ತಿದ್ದು, ಲಕ್ಷಾಂತರ ರೂ. ಮಾಡಿಕೊಂಡಿದ್ದಾರೆ.

ಚಿರತೆ, ಹಂದಿ ಕಾಟ ತಪ್ಪಿಸಲು ಆಗ್ರಹ:

ಈ ಭಾಗದಲ್ಲಿ ಪ್ರತಿವರ್ಷ ಕಾಡು ಹಂದಿ, ಚಿರತೆ ಕಾಟ ಇದ್ದದ್ದೆ. ಯಾವುದೇ ಬೆಳೆ ಬೆಳೆಯಲಾಗದಂತಾಗಿದೆ. ಜೀವ ಭಯದಿಂದಲೇ ಬದುಕುವಂತಾಗಿದೆ. ಲಕ್ಷಾಂತರ ರೂ. ಬೆಳೆ ನಷ್ಟ ಉಂಟಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಈ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಿ ಚಿರತೆ ಸೆರೆ ಹಿಡಿಯಬೇಕು. ಹಂದಿ ಕಾಟ ತಪ್ಪಿಸಬೇಕೆಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಗ್ರಾ.ಪಂ.ಸದಸ್ಯ ಮನು, ಶೋಭಾ ವಿಠಲ, ಚಂದ್ರಶೇಖರ್, ಸೋಮಶೇಖರ್, ಮಂಜುರಾವ್ ಕದಂ, ಶಿವಕುಮಾರ್ ಹಾಗೂ ರೈತರು ಎಚ್ಚರಿಸಿದ್ದಾರೆ.

ಸೆರೆಗೆ ಕ್ರಮ:

ಶಾಲೆಯವರ ಮನವಿಯಂತೆ ಈಗಾಗಲೇ ವಸತಿ ಶಾಲೆ ಬಳಿ ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ. ಗ್ರಾಮಸ್ಥರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಚಿರತೆಗಳನ್ನು ಸೆರೆ ಹಿಡಿಯಲಾಗುವುದೆಂದು ಆರ್.ಎಫ್.ಓ.ನಂದಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next