Advertisement

Hunsur: ಕೃಷಿ ಪಂಪ್ ಸೆಟ್ ಹೆಚ್ಚುವರಿ ಶುಲ್ಕ ಹಿಂಪಡೆಯಲು ಒತ್ತಾಯ; ಧರಣಿ ಸತ್ಯಾಗ್ರಹ

02:57 PM Feb 17, 2024 | Team Udayavani |

ಹುಣಸೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೃಷಿ ಪಂಪ್ ಸೆಟ್ ಗಳ ಬಳಕೆದಾರರ ಸಂಘ, ಸತ್ಯ ಫೌಂಡೇಶನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿದ್ಯುತ್‌ ಗುತ್ತಿಗೆದಾರರ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಈ ವೇಳೆ ಕೃಷಿ ಪಂಪ್ ಸೆಟ್ ಬಳಕೆದಾರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ, ಆದೇಶ ಹಿಂಪಡೆಯದಿದ್ದಲ್ಲಿ ರೈತರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದರು.

ದೆಹಲಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಂಧನ ಖಂಡನೀಯ, ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಈಡೇರಿಸಬೇಕೆಂದು ಒತ್ತಾಯಿಸಿದರು.

ಸತ್ಯ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ರಾಜ್ಯದಲ್ಲಿನ ಬರಗಾಲದಿಂದ ನಲುಗಿ ಹೋಗಿರುವ ರೈತರ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದೆ ಸುಮಾರು 50 ಲಕ್ಷ ಮಂದಿ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಹಿಂದಿನಂತೆ ಸಂಪರ್ಕ ಕಲ್ಪಿಸುವುದು, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ ಅವರು, ರೈತರ ಸಾಲಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟು ಸುಸ್ತಿಯಾಗುತ್ತದೆ ಎಂದು ರೈತರನ್ನು ಹೆದರಿಸಿ, ಪತ್ರಕ್ಕೆ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆಂದು ದೂರಿದರು.

Advertisement

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್ ಫಾರ್ಮರ್ ಸಹಿತ ಉಚಿತ ಮೂಲ ಸೌಕರ್ಯ ಯೋಜನೆ ರದ್ದು ಮಾಡಿರುವುದು  ರೈತರ ಹೆಗಲಿಗೆ ಅಪಾರ ಹೊರೆಯಾದಂತಾಗಿದೆ ಎಂದರು.

ಈ ಹಿಂದಿನಂತೆ ಅಕ್ರಮ-ಸಕ್ರಮ ಯೋಜನೆ ಜಾರಿಗಿಳಿಸಿರೆಂದ ಅವರು ರೈತರಿಗೆ ಕನಿಷ್ಟ ಎರಡು ಲಕ್ಷದವರೆಗೆ ಹೊರೆ ಬೀಳಲಿದೆ. ಈಗಾಗಲೇ ಸಂಪರ್ಕ ಪಡೆದಿದ್ದ ತಾಲೂಕಿನ ಸಾವಿರಕ್ಕೂ ಹೆಚ್ಚು ರೈತರ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಲಾಗಿದ್ದು, ರೈತರು ಆತಂಕಗೊಂಡಿದ್ದಾರೆಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾ.ಅಧ್ಯಕ್ಷ ಮಹೇಶ್ ಬಗರ್‌ಹುಕುಂ ಮಾತನಾಡಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಶೀಘ್ರ ಸಾಗುವಳಿ ವಿತರಿಸಬೇಕು. ಮಂಡ್ಯ ವಿ.ಸಿ.ಫಾರಂನಿಂದ ತಾಲೂಕಿನ ಹರವೆ ರೈತರು ಖರೀದಿಸಿದ್ದ ಸಮೃದ್ದಿ ಭತ್ತದ ತಳಿಯಿಂದ ನಷ್ಟವಾಗಿರುವ ರೈತರಿಗೆ ಸರಕಾರ ಪರಿಹಾರ ನೀಡುವಂತೆ ಮನವಿ ಮಾಡಿದರು.

ದಸಂಸ ಮುಖಂಡ ಡೇವಿಡ್ ಮತ್ತಿತರರು ಮಾತನಾಡಿದರು. ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಯದುಗಿರೀಶ್ ಮನವಿ ಸಲ್ಲಿಸಿದರು.

ಈ ವೇಳೆ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ದಯಾನಂದ್, ಮುದಾಸಿರ್, ಸದಾಶಿವ, ಪುರಸಭಾ ಮಾಜಿಸದಸ್ಯ ವರದರಾಜು, ಬಸಪ್ಪ, ಕುಬೇರೇಗೌಡ, ಬಲವೇಂದ್ರ ಹಾಗೂ ನೂರಕ್ಕೂ ಹೆಚ್ಚು ಮಂದಿ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next