ಹುಣಸೂರು: ಕೃಷಿಗಾಗಿ ಅಪಾರ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದ ರೈತರೊಬ್ಬರು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಮಾರಗೌಡನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಲೇ. ಸೋಮಶೇಖರ್ ಪುತ್ರ ಎಂ.ಎಸ್.ಲಿಂಗರಾಜು(48) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ಮೃತ ರೈತ ಲಿಂಗರಾಜು ಅವರಿಗೆ ಮೂರು ಎಕರೆ ಜಮೀನಿದ್ದು, ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಇಲವಾಲದ ಕೆ.ಜಿ.ಬಿ.ಬ್ಯಾಂಕಿನಲ್ಲಿ 3.25 ಲಕ್ಷ ರೂ. ಹಾಗೂ ದೊಡ್ಡೇ ಕೊಪ್ಪಲು ಕೆ.ಜಿ.ಬಿ.ಬ್ಯಾಂಕಿನಲ್ಲಿ 2.5 ಲಕ್ಷ ಜಂಟಿ ಸಾಲ ಅಲ್ಲದೆ ಬ್ಯಾಂಕ್ ಆಫ್ ಬರೋಡಾದಲ್ಲಿ ಒಂದು ಲಕ್ಷ ರೂ. ಗೆ ಚಿನ್ನ ಅಡವಿಟ್ಟಿದ್ದು, ಎಲ್.ಐ.ಸಿ. ಬ್ಯಾಂಡ್ ಮೇಲೆ 50 ಸಾವಿರ ಹಾಗೂ 2.5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದ್ದು, ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದ ಲಿಂಗರಾಜು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣದ ಕುರಿತು ಮೃತನ ಸಹೋದರ ರವಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.