ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊರ್ವ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ತೀವ್ರಗಾಯಗೊಳಿಸಿರುವ ಘಟನೆ ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ಅ.17ರ ಗುರುವಾರ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದ ಕೃಷಿ, ಕೂಲಿ ಕಾರ್ಮಿಕ ಪ್ರಮೋದ್ ಅಲಿಯಾಸ್ ರಾಜು (27) ಚಾಕುವಿನಿಂದ ಇರಿದು ಹಲ್ಲೆಗೊಳಗಾದವನು. ಅದೇ ಗ್ರಾಮದ ಕುರಿ ವ್ಯಾಪಾರಿ ಕುಮಾರ ನಾಯಕ ಚಾಕುವಿನಿಂದ ಇರಿದವನು. ಈತನನ್ನು ಈಗಾಗಲೇ ಬಂಧಿಸಲಾಗಿದೆ.
ಘಟನೆಯ ವಿವರ: ಹಿರೀಕ್ಯಾತನಹಳ್ಳಿ ಗ್ರಾಮದ ನಿವಾಸಿ ಕೃಷಿ ಕಾರ್ಮಿಕ ಪ್ರಮೋದ್ (27) ಹಾಗೂ ಕುಮಾರ ನಾಯಕ ಅವರ ನಡುವೆ ಹಳೆ ವೈಷಮ್ಯವಿತ್ತು. ಈ ಸಂಬಂಧ ಅ.16ರ ಬುಧವಾರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಮೋದ್ ಮೇಲೆ ಏಕಾಏಕಿ ಕುಮಾರ ನಾಯಕ ದಾಳಿ ನಡೆಸಿ ಎಡಗೈ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ.
ಸಾವಿನ ದವಡೆಯಿಂದ ಬದುಕುಳಿಯಲು ಪ್ರಯತ್ನಿಸಿದ ಪ್ರಮೋದ್ ಅಲ್ಲೇ ಪಕ್ಕದಲ್ಲಿರುವ ಅಂಗಡಿಗಳತ್ತ ಓಡಿದಾಗ ಸ್ಥಳಿಯರು ಆತನನ್ನು ಬದುಕುಳಿಸುವ ಪ್ರಯತ್ನ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇರಿತಕ್ಕೊಳಗಾದ ವ್ಯಕ್ತಿಯನ್ನು ಸ್ಥಳಿಯರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧನ: ಘಟನೆಯಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಆರೋಪಿ ಕುಮಾರ ನಾಯಕನನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.