ಹುಣಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆ.21ರ ಸೋಮವಾರ ಹೆದ್ದಾರಿಯ ಮಲ್ಲಿನಾಥಪುರದ ಬಳಿ ನಡೆದಿದೆ.
ಹುಣಸೂರು ತಾಲೂಕಿನ ಸೋಮನಹಳ್ಳಿ ನಿವಾಸಿ ಜವರ ಶೆಟ್ಟರ ಪುತ್ರ ಗಿರೀಶ್(60) ಸಾವನ್ನಪ್ಪಿದವರು. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಘಟನೆಯ ವಿವರ:
ವಿದ್ಯುತ್ ಕೆಲಸಗಾರನಾಗಿರುವ ಗಿರೀಶ್ ಸೋಮವಾರ ಬೆಳಗ್ಗೆ ಮೈಸೂರು ಕೈಗಾರಿಕಾ ಪ್ರದೇಶದ ವಿಕ್ರಾಂತ್ ಟೈರ್ ಫ್ಯಾಕ್ಟರಿಗೆ ತನ್ನ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-275ರ ಮೈಸೂರು-ಹುಣಸೂರು ರಸ್ತೆಯ ಮಲ್ಲಿನಾಥಪುರ ಗೇಟ್ ಬಳಿಯ ತಿರುವಿನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ದಾರಿ ಹೋಕರ ಮಾಹಿತಿ ಮೇರೆಗೆ ಶವವನ್ನು ಪೊಲೀಸರು ಬಿಳಿಕೆರೆ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.
ವಾಹನ ಪತ್ತೆಗೆ ಬಿಳಿಕೆರೆ ಠಾಣೆ ಪೋಲೀಸರು ಕ್ರಮವಹಿಸಿದ್ದಾರೆಂದು ಪೊಲೀಸ್ ಇನ್ಸ್ ಪೆಕ್ಟರ್ ಲೋಲಾಕ್ಷಿ ತಿಳಿಸಿದ್ದಾರೆ.