Advertisement

Hunsur: ಬಾಲಕಿ ಮೇಲೆ ಹರಿದ‌ ಬಸ್, ಆಶ್ಚರ್ಯಕರ ರೀತಿಯಲ್ಲಿ ಬಾಲಕಿ ಬಚಾವ್

04:17 PM Nov 10, 2023 | Team Udayavani |

ಹುಣಸೂರು: ಚಾಲಕನ ಅಜಾಗರೂಕತೆಯಿಂದ ಶಾಲಾ ಬಾಲಕಿ ಮೇಲೆ ಬಸ್  ಹರಿದರೂ ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ  ಹುಣಸೂರಿನಲ್ಲಿ ನ.9ರ ಗುರುವಾರ ಸಂಜೆ ನಡೆದಿದ್ದು, ಸಿ.ಸಿ‌.ಕ್ಯಾಮರಾದಲ್ಲಿ  ಸೆರೆಯಾಗಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

Advertisement

ನಗರದ ಮಂಜುನಾಥ ಬಡಾವಣೆ‌ ನಿವಾಸಿ ಫೂರ್ಣಚಂದ್ರ ಎಂಬವರ ಪುತ್ರಿ,  ಹುಣಸೂರಿನ ಖಾಸಗಿ ಶಿಕ್ಷಣ ಸಂಸ್ಥೆಯ 3 ನೇ ತರಗತಿ ವಿದ್ಯಾರ್ಥಿನಿ ಯಶಿಕಾ (9) ಪಾರಾದವರು.

ಗುರುವಾರ ಸಂಜೆ ಎಂದಿನಂತೆ‌ ಶಾಲಾ‌ ಬಸ್ ನಲ್ಲಿ ಬಂದ ಯಶಿಕಾ ಮನೆಯ ಎದುರು ತನ್ನ ಸಹೋದರಿ ಹಂಸಿಕಾಳೊಂದಿಗೆ‌ ಬಸ್ ನಿಂದ ಕೆಳಗೆ ಇಳಿದಿದ್ದಾರೆ.

ಈ ಸಂದರ್ಭ ಆಕೆಯ ಸಹೋದರಿ ಇಳಿದು ನಿಂತಿದ್ದಳು. ಆದರೆ ಯಶಿಕಾ ಮನೆಗೆ ತೆರಳಲು ಬಸ್ ನ  ಮುಂದೆಯೇ ರಸ್ತೆ ದಾಟುವ ವೇಳೆ ಚಾಲಕ ಬಸ್‌ ಮುಂದೆ ಚಲಿಸಿದ್ದಾನೆ.

ಬಸ್ ಯಶಿಕಾಳ ಮೇಲೆ ಹರಿದರೂ ಅದೃಷ್ಟವಶಾತ್ ಹಳ್ಳ ಇದ್ದುದ್ದರಿಂದ ಯಶಿಕಾ ಕೆಳಗೆ ಬಿದ್ದಿದ್ದಾಳೆ.  ಆಕೆಯ‌ ಮೇಲೆ ಬಸ್  ಹರಿದಿದೆ. ಅಷ್ಟರಲ್ಲಿ‌ ರಸ್ತೆಯಲ್ಲಿ ನಿಂತಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಚಾಲಕ ಬಸ್‌ ನಿಲ್ಲಿಸಿ ಇಳಿದು ಬಂದಿದ್ದಾನೆ ಎನ್ನಲಾಗಿದೆ.

Advertisement

ಬಾಲಕಿ ಹಳ್ಳದಳ್ಲಿ ಬಿದ್ದಿದ್ದರಿಂದಾಗಿ ಬಸ್ ಹರಿದರೂ ಹೆಚ್ಚು ಏನು ಗಾಯಗಳಾಗದೇ ಕಾಲಿನ ಮಂಡಿಗೆ ಸಣ್ಣಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸಹೋದರಿ ಹಂಸಿಕಾ ಜೊರಾಗಿ ಕೂಗಿದ್ದು, ಮಗಳ ಕೂಗು ಕೇಳಿದ ತಾಯಿ  ಮನೆಯಿಂದ ಹೊರಗೆ ಬರುವಷ್ಟರಲ್ಲಿ ಅಕ್ಕಪಕ್ಕದವರು ಬಂದು ಗಾಯಾಳು ಯಶಿಕಾಳನ್ನು ಸಂತೈಸಿದರು.

ಆತಂಕದಿಂದ ಆಸ್ಪತ್ರೆಗೆ ‌ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಮೈಸೂರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ವಿಷಯ ತಿಳಿದ ಶಾಲಾ ಮುಖ್ಯಸ್ಥರು ಭೇಟಿ ನೀಡಿ ಬಾಲಕಿ ಯಶಿಕಾಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೋಷಕರು ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

ಬಿಇಓ ಭೇಟಿ:

ಶುಕ್ರವಾರ ಬೆಳಗ್ಗೆ ಬಿಇಓ ರೇವಣ್ಣ‌ ಬಾಲಕಿಯ ಮನೆಗೆ ಭೇಟಿ ನೀಡಿ ಘಟನೆಯ ಕುರಿತು ಪೋಷಕರಿಂದ ಮಾಹಿತಿ ಪಡೆದರು.

ಇದೇ ಶಾಲಾ ಬಸ್ ಚಾಲಕ ವಾರದ ಹಿಂದಷ್ಟೆ ನ್ಯೂ ಮಾರುತಿ ಬಡಾವಣೆಯಲ್ಲಿ ವೇಗವಾಗಿ ಬಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದು ಮುಂದೆ ಹೋಗುತ್ತಿದ್ದವನ್ನು ಸಾರ್ವಜನಿಕರೇ ತಡೆದು ಎಚ್ಚರಿಸಿ ಕಳುಹಿಸಿದ್ದರೆಂದು ಬಡಾವಣೆ ನಿವಾಸಿ ಪ್ರದೀಪ್ ಮಾಹಿತಿ ನೀಡಿದರು.

ಸರಕಾರಿ ಶಾಲಾ ಬಸ್ ಗಳಲ್ಲಿ ಚಾಲಕರೊಂದಿಗೆ ಸಹಾಯಕರು ಇರುವಿಕೆ ಕಡ್ಡಾಯಗೊಳಿಸಿದೆ. ಆದರೆ ಗುರುವಾರ ಸಹಾಯಕರು ರಜೆ ಇದ್ದುದ್ದರಿಂದ ಬಸ್ ನಲ್ಲಿ  ಚಾಲಕ ಮಾತ್ರ ಇದ್ದುದರಿಂದ ಬಾಲಕಿ ಬಸ್‌ ಮುಂದೆ ಬಂದಿದ್ದನ್ನು ಗಮನಿಸದ ಚಾಲಕ ಬಸ್ ಓಡಿಸಲು ಮುಂದಾಗಿದ್ದಾರೆ.

ಬಿಇಓ ಚ್ಚರಿಕೆ:

ಆಶ್ಚರ್ಯಕರ ರೀತಿಯಲ್ಲಿ ಬಾಲಕಿ ಬಚಾವ್ ಆಗಿದ್ದಾಳೆ. ಈ ಬಗ್ಗೆ ಶಾಲೆಯವರಿಂದ ಸಮಗ್ರ ಮಾಹಿತಿ ಪಡೆಯಲಾಗುವುದು. ಮುಂದೆ ಹೀಗಾಗದಂತೆ ‌ಎಚ್ಚರ ವಹಿಸಿ ಬಸ್ ವ್ಯವಸ್ಥೆ ಮಾಡುವಂತೆ ಶಾಲೆಗಳಲ್ಲಿ ಸೂಚಿಸಲಾಗುವುದೆಂದು‌ ಬಿಇಓ ತಿಳಿಸಿದ್ದಾರೆ.

ಸದ್ಯ ನಮ್ಮ ಮಗುವಿಗೆ ಯಾವುದೇ ತೊಂದರೆ ಆಗಿಲ್ಲ. ಅದರೂ ಇಬ್ಬರು ಮಕ್ಕಳು  ಶಾಕ್ ಆಗಿದ್ದಾರೆ. ಶಾಲೆಯವರನ್ನು ನಂಬಿ ಮಕ್ಕಳನ್ನು ಕಳುಹಿಸುತ್ತೇವೆ. ವಾಪಸ್ ಮನೆಗೆ ಬಿಡುವವರೆಗೆ ರಕ್ಷಣೆ ಜವಾಬ್ದಾರಿ ಅವರೇ ಹೊರಬೇಕು. –ಪೂರ್ಣಚಂದ್ರ, ಯಶಿಕಾ ತಂದೆ.

ಶುಕ್ರವಾರ ಸಂಜೆವರೆಗೂ ಈ ಸಂಬಂಧ ಯಾರು ಸಹ ದೂರು ನೀಡಿಲ್ಲ. ಆದರೆ ಬಾಲಕಿ ಯಶಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ‌ಮಾಹಿತಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next