ಹುಣಸೂರು: ಬೈಕ್‌ಗೆ ಟಾಟಾ ಏಸ್ ವಾಹನ ಮುಖಾಮುಖಿ ಢಿಕಿಯಾಗಿ ಬೈಕ್ ಸವಾರ ತೀವ್ರಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವ ಘಟನೆ ಹುಣಸೂರು-ಕೆ.ಆರ್.ನಗರ ರಸ್ತೆಯ ತಾಲೂಕಿನ ಬಿಳಿಗೆರೆ ಬಳಿಯಲ್ಲಿ ಬುಧವಾರ ನಡೆದಿದೆ.ತೀವ್ರಗಾಯಗೊಂಡ ಹಿಂಬದಿಯ ಸವಾರರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಣಸೂರು ನಗರದ ರಹಮತ್ ಮೊಹಲ್ಲಾ ನಿವಾಸಿ, ಜೀಯಾ ಚಿಕನ್ ಮಾಲಿಕ ಜೀಯಾವುಲ್ಲಾರ ಪುತ್ರ ಸುಹೇಬ್(24) ಸಾವನ್ನಪ್ಪಿದ್ದು, ಹಿಂಬದಿಯ ಸವಾರ ರಜಾಕ್ ಮೊಹಲ್ಲಾದ ಜುನೇದ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಹೇಬ್ ತಂದೆ ಸಗಟು ಕೋಳಿ ವ್ಯಾಪಾರಿಯಾಗಿದ್ದು, ಕಾರ್ಯ ನಿಮಿತ್ತ ಹುಣಸೂರು ಕಡೆಯಿಂದ ಸುಹೇಬ್ ತನ್ನ ಸ್ನೇಹಿತ ಜುನೇದ್ ನೊಂದಿಗೆ ಸಿಬಿಜೆಡ್ ಬೈಕಿನಲ್ಲಿ ಕೆ.ಆರ್.ನಗರ ಕಡೆಗೆ ತೆರಳುತ್ತಿದ್ದ ವೇಳೆ ಗಾವಡಗೆರೆಯಿಂದ ಹುಣಸೂರಿಗೆ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ತೀವ್ರಗಾಯಗೊಂಡಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.