ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಹಣ್ಣಿ ತೋಟದಲ್ಲಿ ಸೇರಿಕೊಂಡಿದ್ದ ಮೂರು ವರ್ಷ ಪ್ರಾಯದ ಹೆಣ್ಣು ಹುಲಿಯೊಂದು ಸೆರೆಯಾಗಿದೆ.
ಉದ್ಯಾನದಂಚಿನ ಮಳಲಿ ಗ್ರಾಮದ ಸುಬ್ರಮಣಿ ಎಂಬುವವರ ಹಣ್ಣಿನ ತೋಟದಲ್ಲಿ ಹುಲಿ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತತ್ ಕ್ಷಣವೇ ಕಾರ್ಯಪ್ರವೃತ್ತರಾದ ಅಂತರೆಸಂತೆ ವಲಯದ ಅರಣ್ಯಸಿಬ್ಬಂದಿಗಳು ದೌಡಾಯಿಸಿ ಹುಲಿ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಖ್ಯ ವನ್ಯಜೀವಿ ಪರಿಪಾಲರ ನಿರ್ದೇಶನದಂತೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ, ಎಚ್.ಡಿ.ಕೋಟೆ ಡಿಸಿಎಫ್. ಅಭಿಷೇಕ್, ಎಸಿಎಫ್ ರಂಗಸ್ವಾಮಿ ಹಾಗೂ ನಾಗರಹೊಳೆ ಆನೆಪ್ರಭಾರಕರಾದ ಡಾ.ಎಚ್.ರಮೇಶ್ ಮಾರ್ಗದರ್ಶನದಲ್ಲಿ ಕುಮ್ಕಿ ಆನೆಗಳಾದ ಮಹೇಂದ್ರ ಮತ್ತು ಭೀಮ ಆನೆಗಳೊಂದಿಗೆ ಸಿಬ್ಬಂದಿಗಳು ಹುಲಿ ಆಶ್ರಯ ಪಡೆದಿದ್ದ ತೋಟವನ್ನು ಸುತ್ತುವರೆದರು.
ಸಿಬ್ಬಂದಿಗಳ ತಂಡ ಕುಮ್ಕಿ ಆನೆಗಳೊಂದಿಗೆಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲಾಯಿತು.ನಿನ್ನೆಯಷ್ಟೆ ಗಂಡು ಹುಲಿಯನ್ನು ಬಾಳೆ ತೋಟದಲ್ಲಿ ಸೆರೆ ಹಿಡಿದು ಬನ್ನೇರು ಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು.
ಸೆರೆ ಸಿಕ್ಕ ಹುಲಿಯ ಆರೋಗ್ಯ ತಪಾಸಣೆ ನಡೆಸಿ, ಮುಖ್ಯ ವನ್ಯಜೀವಿಪರಿಪಾಲಕರ ನಿರ್ದೇಶನದಂತೆ ಮತ್ತೆ ಅರಣ್ಯಕ್ಕೆ ಸೇರಿಸಲಾಯಿತೆಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಚ್.ಡಿ.ಕೋಟೆ ಡಿಸಿಎಫ್. ಅಭಿಷೇಕ್, ನಾಗರಹೊಳೆ ಆನೆಪ್ರಭಾರಕರಾದ ಡಾ.ಎಚ್.ರಮೇಶ್, ಆರ್.ಎಫ್.ಓ.ಗಳಾದ ಭರತ್ ತಳವಾರ್, ಎಸ್.ಡಿ.ಮಧು, ಕೆ.ಎನ್.ಹರ್ಷಿತ್, ಪೂಜಾಯಾಲಿಗಾರ್, ರಂಜನ್, ಡಿ.ಆರ್.ಎಫ್.ಓ.ಗಳು, ದುಬಾರೆ,ಅಂತರಸಂತೆ ಅರಣ್ಯ ಸಿಬ್ಬಂದಿ, ಎಸ್.ಟಿಎಫ್ ತಂಡ, ಅಂತರ ಸಂತೆ ಠಾಣೆ ಪೊಲೀಸರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.