ಹುಣಸೂರು: ತಾಲೂಕಿನ ಗ್ರಾಮೀಣ ಪ್ರದೇಶದ ಪ್ರತಿಭೆಯೊಬ್ಬರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್ ಪಡೆದು ಸಾಧನೆಗೈದಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತಿಪ್ಪಲಾಪುರ ಗ್ರಾಮದ ನಿವಾಸಿ, ದಿ.ಎಲ್.ಮಹದೇವ- ಕೆ.ಟಿ.ಶೈಲಜಾ ದಂಪತಿ ಪುತ್ರ ಎಂ.ಲೇಖನ್ ನಾಲ್ಕನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಯಾವುದೇ ತರಬೇತಿ ಪಡೆಯದೆ ಯುಟ್ಯೂಬ್‌ನ ಯುಪಿಎಸ್‌ಸಿ ಕುರಿತ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆದು ಮನೆಯಲ್ಲಿಯೇ ಸತತ ಅಭ್ಯಾಸ ನಡೆಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದು, ಇತರರಿಗೆ ಮಾದರಿ ಎನಿಸಿದ್ದಾರೆ.
ಇವರು ಹನಗೋಡಿನ ಲಕ್ಷ್ಮಣತೀರ್ಥ ವಿದ್ಯಾ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ, ಹುಣಸೂರಿನ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ, ಫ್ರೌಢಶಿಕ್ಷಣ ನಂತರ ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯು ಮುಗಿಸಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಲೇಖನ್, ನಂತರ ತಂದೆಯ ಸಲಹೆಯ ಮೇರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರಾರಂಭಿಸಿದ್ದರು. ಸತತ ಪ್ರಯತ್ನದಿಂದ ಯಶಸ್ಸು ಕಂಡುಕೊಂಡಿದ್ದಾರೆ.
ಈಗಾಗಲೆ ಲೇಖನ್ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರಿಂಗ್ ಹುದ್ದೆಗೆ 2023 ರಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದರು. ಇದೀಗ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿ ತೇರ್ಗಡೆ ಹೊಂದಿದ್ದಾರೆ.
ತಂದೆ ಮಹದೇವರವರೇ ಸ್ಪೂರ್ತಿ ಎಂದಿರುವ ಲೇಖನ್ ಸತತ ಪರಿಶ್ರಮದಿಂದ ಉನ್ನತ ಹುದ್ದೆ ಗಿಟ್ಟಿಸಬಹುದೆಂಬುದನ್ನು ಇತರರಿಗೆ ತಿಳಿಸಿಕೊಟ್ಟಿದ್ದಾರೆ.