Advertisement

ಹಸಿವು ಬಡತನ ಮತ್ತು ಹೂ ಮಾರುವ ಹುಡುಗಿ

03:50 AM Apr 26, 2017 | |

ಒಂದು ದಿನ ನಾನು ತುಮಕೂರಿನಿಂದ ನಮ್ಮ ಹಳ್ಳಿಗೆ ಹೊರಡುವಾಗ, ಗೌರಿಬಿದನೂರಿನ ಒಂದು ಸರ್ಕಲ್ಲಿನಲ್ಲಿ ನನ್ನ ಕಣ್ಣಿಗೆ ಬಿದ್ದಂಥ ದೃಶ್ಯವಿದು. ಅವಳ ಹೆಸರು ತಿಳಿಯದು, ನೋಡಲು ಬೆಳ್ಳಗೆ ಉದ್ದನೆ ಕೂದಲು, ತೆಳ್ಳನೆಯ ಮೈಕಟ್ಟು ಹೊಂದಿದ್ದಳು. ಕೈಯಲ್ಲಿ ಹೂ ಬುಟ್ಟಿ. ನಾನು ಹೇಳುತ್ತಿರುವುದು 2ನೇ ತರಗತಿ ಓದುತ್ತಿರುವ ಒಂದು ಹುಡುಗಿಯ ವಿಚಾರ. ಅವಳು ಪ್ರತಿದಿನ ರಾತ್ರಿ ಸರಿಸುಮಾರು 9.30ರ ತನಕ, ಅಂದರೆ ಅವಳ ಬುಟ್ಟಿಯಲ್ಲಿನ ಹೂವು ಖಾಲಿಯವವರೆಗೆ ಮನೆಗೆ ಹೋಗುವುದಿಲ್ಲವಂತೆ. 

Advertisement

ಆ ದಿನ ರಾತ್ರಿ ಸುಮಾರು 8.50ರ ಸಮಯ. ಯಾವುದೇ ಬಸ್ಸುಗಳಿರಲಿಲ್ಲ. ದಾರಿಯ ತುಂಬಾ ಬರೀ ಗಂಡಸರು, ಕುಡಿದವರು ಗಲಾಟೆ ಮಾಡುತ್ತಿದ್ದರು. ಎಲ್ಲರ ಮಧ್ಯದಲ್ಲಿ ಈ ಹುಡುಗಿ ಒಬ್ಬಳೇ ಇದ್ದಳು. ಅವಳನ್ನು ನೋಡಿ ನನಗೆ ಪಿಚ್ಚೆನಿಸಿತು. ಎಲ್ಲರ ಬಳಿ ಹೋಗಿ “ಅಂಕಲ್‌, ಹೂ ತಗೊಳ್ಳಿ’ ಎಂದು ಅಂಗಲಾಚುತ್ತಿದ್ದಳು. ಅಲ್ಲೊಬ್ಬ ವ್ಯಕ್ತಿ- “ದಿನಾ ನಿಂದು ಇದೇ ಗೋಳು. ಮಾಡೋಕೆ ಏನೂ ಕೆಲ್ಸಾ ಇಲ್ವಾ?’ ಎಂದು ಬೈದು ಕಳಿಸಿದನು. ನಂತರ ನನ್ನ ಬಳಿ ಒಂದು, “ಅಕ್ಕಾ, ಪ್ಲೀಸ್‌ ಹೂ ತಗೊಳ್ಳಿ’, ಎಂದಾಗ ಅವಳ ಕಣ್ಣಲ್ಲಿ ನೀರಿತ್ತು. ನಾನು ಏನೂ ಮಾತನಾಡದೆ 10 ರೂಪಾಯಿಗೆ ಹೂ ತಗೊಂಡೆ. ಆದರೆ ಅವಳು “ಅಕ್ಕ, ಎಲ್ಲವನ್ನೂ ತೆಗೆದುಕೊಳ್ಳಿ. ನಾನು ಬೇಗ ಮನೆಗೆ ಹೋಗ್ಬೇಕು’ ಅಂದಳು. ನಾನು ಇಷ್ಟು ಹೂನ ಅವಶ್ಯಕತೆ ನನಗಿಲ್ಲಮ್ಮ ಅಂದ ಕೂಡಲೇ ಮತ್ತೂಬ್ಬ ವ್ಯಕ್ತಿ ಬಂದು 100 ರೂಪಾಯಿ ಕೊಟ್ಟು ಬುಟ್ಟಿ¿åಲ್ಲಿದ್ದ ಅಷ್ಟೂ ಹೂವನ್ನು ತೆಗೆದುಕೊಂಡು ಹೇಳಿದರು- “ಈಗ ಹೋಗು ಮನೆಗೆ’. 

ನಾನು ಅವಳನ್ನು ತಡೆದು, “ಯಾಕೆ ಇಷ್ಟು ತಡರಾತ್ರಿಯಾದರೂ ಹೂ ಮಾರುತ್ತಿದ್ದೀಯಾ?’ ಎಂದು ಕೇಳಿದಾಗ “ಅಮ್ಮ ಕೊಟ್ಟ ಹೂವನ್ನು ಪೂರ್ತಿಯಾಗಿ ಮಾರಿಕೊಂಡು ಹೋಗದಿದ್ದರೆ ಮನೆಗೆ ಸೇರಿಸುವುದಿಲ್ಲ. ಇದರಿಂದ ಬಂದ ದುಡ್ಡಿನಿಂದಲೇ ನಾವು ಜೀವನ ನಡೆಸಬೇಕು. ನನ್ನ ವಿದ್ಯಾಭ್ಯಾಸವೂ ಹೂ ಮಾರಿದ ಹಣದಿಂದಲೇ ನಡೆಯಬೇಕು’ ಎಂದ ಹುಡುಗಿ ಹೂ ಖಾಲಿಯಾದ ಸಂತಸದಿಂದ ಮನೆಯ ಕಡೆಗೆ ಓಡುವವಳಂತೆ ನಡೆದುಹೋದಳುಗೋಡಿದಳು.

ಒಂದು ಕ್ಷಣಕ್ಕೆ ಮನಸ್ಸಿನಲ್ಲಿ ಒಂಥರಾ ನೋವು. ಅಷ್ಟು ಚಿಕ್ಕವಳು, ರಾತ್ರಿ ಒಂಭತ್ತೂವರೆಯವರೆಗೆ ಬಸ್‌ ನಿಲ್ದಾಣದಲ್ಲಿ ಹೂ ಮಾರುವುದು, ಅದೂ ಅಲ್ಲಿ ಹೆಚ್ಚಾಗಿ ಕುಡುಕರು, ಪುಂಡರು ಇರುವ ಸ್ಥಳ. ಇದೆಲ್ಲ ಗೊತ್ತಿದ್ದರೂ ಆಕೆ ನಿರ್ಲಿಪ್ತಳಂತೆ ಹೂ ಮಾರುತ್ತಿದ್ದುದನ್ನು ಕಂಡಾಗ, ಯಾರಿಂದ ಬೇಕಾದರೂ, ಯಾವ ಹೊತ್ತಿನಲ್ಲಿ ಬೇಕಾದರೂ, ಎಂಥ ಕೆಲಸವನ್ನಾದರೂ ಮಾಡಿಸುವ ಶಕ್ತಿ ಹಸಿವು ಮತ್ತು ಬಡತನಕ್ಕಿದೆ ಎಂದುಕೊಂಡೆ.

ತ್ರಿವೇಣಿ ಎಚ್‌. ಜಿ., ಗೌರಿಬಿದನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next