ಮಲ್ಪೆ: ಒಂದು ಕಾಲದಲ್ಲಿ ಹೊಟ್ಟೆಗೆ ಅನ್ನ, ಆಹಾರವಿಲ್ಲದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ದೇಶ ನಮ್ಮದು. ಆದರೆ ಇಂದು ಕರ್ನಾಟಕದಲ್ಲಿ ಪ್ರತಿಯೊಬ್ಬ ಬಡವನಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ ದೇಶದ ಏಕೈಕ ಸರಕಾರ ಸಿದ್ದರಾಮಯ್ಯ ಅವರ ಸರಕಾರ ಎಂದು ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳವಾರ ಅವರು ಬಡಾನಿಡಿಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಡಾನಿಡಿಯೂರು ಗ್ರಾಮ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಉಡುಪಿ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಈವರೆಗೆ ಸುಮಾರು 16,000ಕ್ಕೂ ಮಿಕ್ಕ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ. ಹಿಂದೆ ಬಡವರಿಗೆ ಹಸುರು ಕಾರ್ಡ್ ನೀಡಲಾಗುತ್ತಿತ್ತು. ಹಿಂದಿನ ಸರಕಾರ ಅದನ್ನು ವಾಪಸ್ ತೆಗೆದುಕೊಂಡು ಕೆಂಪು ಕಾರ್ಡ್ ಕೊಡುವ ಕೆಲಸ ಮಾಡಿದರೆ ಸಿದ್ದರಾಮಯ್ಯ ಸರಕಾರ ಯಾರಿಗೆಲ್ಲ ಬಿಪಿಎಲ್ ಕಾರ್ಡ್ ಅಗತ್ಯವಿದೆಯೋ ಅವರಿಗೆಲ್ಲ ಬಿಪಿಎಲ್ ಕಾರ್ಡ್ ಕೊಡುವ ಕೆಲಸ ಮಾಡಿದೆ ಎಂದರು.
ಉಡುಪಿ ನಗರಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ತಾ.ಪಂ. ಸದಸ್ಯ ಶರತ್ ಕುಮಾರ್ ಬೈಲಕರೆ ಬಡಾನಿಡಿಯೂರು ಗ್ರಾ.ಪಂ. ಅಧ್ಯಕ್ಷ ಉಮೇಶ್ ಪೂಜಾರಿ, ಉಪಾಧ್ಯಕ್ಷೆ ಶೋಭಾ ಸಾಲ್ಯಾನ್, ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಲೇನಿ ಫೆರ್ನಾಂಡಿಸ್, ಮಾಜಿ ಉಪಾಧ್ಯಕ್ಷ ರಾಮಪ್ಪ ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯ ಗಣೇಶ್ ನೆರ್ಗಿ, ಉಮೇಶ್ ನಾಯ್ಕ, ಉಡುಪಿ ತಹಶೀಲಾರ ಮಹೇಶ್ಚಂದ್ರ, ಕಂದಾಯ ಅಧಿಕಾರಿ ಸುಧಾಕರ ಶೆಟ್ಟಿ, ಡಿವೈಎಸ್ಪಿ ಕುಮಾರಸ್ವಾಮಿ, ಕೆಎಫ್‌ಡಿಸಿ ನಿರ್ದೇಶಕ ಬಿ.ಪಿ. ರಮೇಶ್ ಪೂಜಾರಿ, ಬಡಾನಿಡಿಯೂರು ಗ್ರಾ.ಪಂ. ಸದಸ್ಯರಾದ ನಿರಂಜನ ಶೆಟ್ಟಿ, ಜೋಸೆಪ್ ಪಿಂಟೋ, ಸುಲೋಚನಾ, ಗೀತಾ, ಜನಾರ್ದನ ಪೂಜಾರಿ, ಗಿರೀಶ್ ಸಾಲ್ಯಾನ್, ಶೀಲಾ, ಲಲಿತಾ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಹರಿಕೃಷ್ಣ ಶಿವತ್ತಾಯ ಪ್ರಸ್ತಾವನೆಗೈದು ಸ್ವಾಗಸಿದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ| ಸರ್ವೋತ್ತಮ ವಂದಿಸಿದರು.
ಚಿಕ್ಕ ಗ್ರಾಮ ದೊಡ್ಡ ಅಭಿವೃದ್ಧಿ
ಬಡಾನಿಡಿಯೂರು ಉಡುಪಿ ವಿಧಾನ ಸಭಾ ಕ್ಷೇತ್ರದ ಅತೀ ಚಿಕ್ಕ ಗ್ರಾಮವಾದರೂ ಗರಿಷ್ಠ ಮಟ್ಟದ ಅಭಿವೃದ್ಧಿ ನಡೆಸಲಾಗಿದೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಈ ಗ್ರಾಮದ ವಿವಿಧ ರಸ್ತೆ, ಸೇತುವೆಗಳ ಅಭಿವೃದ್ಧಿಗೆ 16.40 ಕೋ. ರೂ. ಅನುದಾನ ವಿನಿಯೋಗಿಸಿ ಕಾಮಗಾರಿ ನಡೆಸಲಾಗಿದೆ. ಈ ಭಾಗದ ಜನರಿಗೆ ಅನುಕೂಲತೆಗಾಗಿ ಖಾಸಗಿ ಬಸ್ ಮಾಲಕರ ವಿರೋಧದ ನಡುವೆಯೂ ಸರಕಾರಿ ಬಸ್ ಒದಗಿಸಲಾಗಿದೆ. ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಮೂಲಕ ಗ್ರಾಮದಲ್ಲಿ ವಿದ್ಯುತ್ ಲೋ ವೋಲ್ಟೆಜ್ ಸಮಸ್ಯೆ ನೀಗಿಸಲಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.