Advertisement

ಹಂಗಾರಕಟ್ಟೆ : ತುಕ್ಕು ತಿನ್ನುತ್ತಿದೆ ಬಾರ್ಜ್‌

10:59 AM Jul 23, 2018 | Team Udayavani |

ಕೋಟ: ಹಂಗಾರಕಟ್ಟೆ – ಕೋಡಿಬೆಂಗ್ರೆ ನಡುವೆ ಸಂಪರ್ಕ ಸೇತುವಾಗಬೇಕಿದ್ದ ಬಾರ್ಜ್‌ ಕೇವಲ ಮೂರೇ ತಿಂಗಳು ಸಂಚಾರ ನಡೆಸಿ ಒಂದು ವರ್ಷದಿಂದ ದಕ್ಕೆಯಲ್ಲಿ ತುಕ್ಕು ತಿನ್ನುತ್ತಿದೆ. 

Advertisement

ಸಮುದ್ರ ಹಾಗೂ ಅಳಿವೆಯಿಂದ ಆವೃತವಾದ ದ್ವೀಪ ಕೋಡಿಬೆಂಗ್ರೆ ಕೋಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ್ದು. ಇಲ್ಲಿನ ನಿವಾಸಿಗಳು ಬ್ರಹ್ಮಾವರ, ಕೋಡಿ, ಹಂಗಾರಕಟ್ಟೆ ಪ್ರದೇಶಗಳಿಗೆ ವಾಹನದಲ್ಲಿ ತೆರಳಲು ನೇಜಾರು, ಸಂತೆಕಟ್ಟೆ ಮೂಲಕ ಸುಮಾರು 25- 30 ಕಿ.ಮೀ. ಬಳಸಿ ಸಾಗಬೇಕಿತ್ತು. ಆದರೆ ನದಿ ದಾಟಿದರೆ ಐದಾರು ಕಿ.ಮೀ. ಅಷ್ಟೇ ದೂರ. ಹೀಗಾಗಿ ಇಲ್ಲಿನವರ ಬೇಡಿಕೆ ಮೇರೆಗೆ ಸರಕಾರ ಈ ಬಾರ್ಜ್‌ ಅನ್ನು 1.45 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿತ್ತು. 2017ರ ಜ. 24ರಂದು ಕಾರ್ಯಾರಂಭ ಮಾಡಿತ್ತು.

ಮೂರೇ ತಿಂಗಳಲ್ಲಿ  ಮೂಲೆಗೆ
ಬಾರ್ಜ್‌ 2017ರ ಎಪ್ರಿಲ್‌ ತನಕ ಯಶಸ್ವಿಯಾಗಿ ಕಾರ್ಯಾಚರಿಸಿತು. ಜನರಲ್ಲದೆ ಕಾರು, ಬೈಕ್‌, ಸರಕನ್ನೂ ಸಾಗಿಸಲಾಗುತ್ತಿತ್ತು. ಬಾರ್ಜ್‌ ಸಂಚಾರ ಹೊಸ ಅನುಭವ ಆಗಿದ್ದರಿಂದ ಪ್ರವಾಸಿಗರೂ ಆಗಮಿಸುತ್ತಿದ್ದರು. ಇದೊಂದು ಪ್ರವಾಸಿ ಆಕರ್ಷಣೆ ಕೇಂದ್ರ ವಾಗುವ ಸಾಧ್ಯತೆಯೂ ಇತ್ತು. ಆದರೆ ಅದೇ ಮಳೆಗಾಲದಲ್ಲಿ ಸಂಚಾರ ಸ್ಥಗಿತಗೊಳಿಸಿತು. 

ಸೆಪ್ಟೆಂಬರ್‌ನಲ್ಲಿ ಪುನರಾ ರಂಭ ವಾಗುವ ಭರವಸೆ ಇಂದಿಗೂ ಈಡೇರಿಲ್ಲ. ಕೋಡಿ ಬೆಂಗ್ರೆ ಹಬ್ಬಕ್ಕೆಂದು ಮೂರು ದಿನ ಸಂಚರಿ ಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ.

ಚಿಕ್ಕ ಫೆರಿ ಬೋಟ್‌ ಪರ್ಯಾಯ
ಬಳಿಕ ಚಿಕ್ಕ ಫೆರಿ ಬೋಟ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದರಲ್ಲಿ ದ್ವಿಚಕ್ರ ವಾಹನ ವಿನಾ ಬೇರೆ ವಾಹನ ಸಾಗಾಟ ಅಸಾಧ್ಯ. ಹೀಗಾಗಿ ಸುತ್ತು ಬಳಸಿನ ಹಾದಿ ತಪ್ಪಲಿಲ್ಲ. ಅದು ದಿನಕ್ಕೆ ಕೇವಲ 11 ಟ್ರಿಪ್‌ ನಡೆಸುತ್ತಿದೆ. ಇದರಿಂದ ಜನರಿಗೆ ಅನನೂಕೂಲ ಹೆಚ್ಚಿದೆ. ಹಿಂದಿನ ವೇಳಾಪಟ್ಟಿಯಂತೆ ಹೆಚ್ಚು ಟ್ರಿಪ್‌ ನಡೆಸಬೇಕು ಎನ್ನುವುದು ಸ್ಥಳೀಯರ ಒಂದು ಬೇಡಿಕೆಯಾದರೆ, ದೊಡ್ಡ ಬಾರ್ಜ್‌ನ ಬದಲು ಮಧ್ಯಮ ಗಾತ್ರದ್ದನ್ನು ಕೊಡಿ ಎಂಬುದು ಮತ್ತೂಂದು ಬೇಡಿಕೆ.

Advertisement

ಸ್ಥಳೀಯ ವಾರ್ಡ್‌ ಸದಸ್ಯರು ಗ್ರಾ. ಪಂ. ಸಾಮಾನ್ಯ ಸಭೆಯಲ್ಲಿ ಈಗಿರುವ ಬಾರ್ಜ್‌ ವಾಪಸ್‌ ಪಡೆದು ಮಧ್ಯಮ ಗಾತ್ರದ ಬಾರ್ಜ್‌ ನೀಡುವಂತೆ ನಿರ್ಣಯ ಕೈಗೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಈಗಿರುವ ಫೆರಿ ಬೋಟಿನ ಟ್ರಿಪ್‌ ಹೆಚ್ಚಿಸುವಂತೆಯೂ ಕೇಳಿಕೊಂಡಿದ್ದಾರೆ. 
– ಸುರೇಶ್‌, ಪಿಡಿಒ, ಕೋಡಿ ಗ್ರಾ. ಪಂ.

ಮಧ್ಯಮ ಗಾತ್ರದ ಬಾರ್ಜ್‌ ನೀಡುವಂತೆ ಸ್ಥಳೀಯರ ಮನವಿ ಬಂದಿದೆ. ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವೇ ವ್ಯವಸ್ಥೆಯಾಗಲಿದೆ.
– ಥಾಮಸ್‌ ಫೆರಿ ಇನ್ಸ್‌ಪೆಕ್ಟರ್‌

–  ರಾಜೇಶ್‌ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next