ಬೈಕಂಪಾಡಿ: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬ ಅನುಮಾನಗಳು ನಾಗರಿಕರನ್ನು ಕಾಡುತ್ತಿದೆ. ಹೊಂಡಗಳಿಂದ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ನೆರೆಯಿಂದ ತತ್ತರಿಸಿದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ನೆರೆ ಪರಿಹಾರಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.
ಮಂಗಳೂರು ಉತ್ತರ ಕಾಂಗ್ರೆಸ್ ಘಟಕ, ಮಾಜಿ ಶಾಸಕ ಮೊದಿನ್ ಬಾವಾ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ದುರವಸ್ಥೆಯನ್ನು ಖಂಡಿಸಿ ಸುರತ್ಕಲ್ ಸಮೀಪದ ಕುಳಾಯಿಯಿಂದ ಬೈಕಂಪಾಡಿ ವರೆಗೆ ಆಯೋಜಿಸಿದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಎಚ್ಚರಿಸಲು ಕೆಟ್ಟ ರಸ್ತೆಯಲ್ಲಿಯೇ ಪಾದಯಾತ್ರೆ ಮಾಡಲಾಯಿತು. ಹೊಂಡದ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಂಡರೂ ಕೆಟ್ಟ ರಸ್ತೆಗೆ ಬೇಕಾಬಿಟ್ಟಿ ಟೋಲ್ ವಸೂಲಿಗೆ ಅವಕಾಶ ನೀಡಲಾಯಿತು. ಹೀಗಾಗಿ ಇದು ದುಬಾರಿ ರಸ್ತೆಯಾಗಿದೆ, ಇನ್ನೊಂದೆಡೆ ಪಂಪ್‌ವೆಲ್ ಸೇತುವೆಯನ್ನು ಪೂರ್ಣಗೊಳಿಸದ ಈ ಭಾಗದ ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರಾದರು. ಜನರ ಆಶೋತ್ತರಗಳನ್ನು ಈಡೇರಿಸಲಾಗದ ಸಂಸದರು ಯಾಕಿರಬೇಕು ಎಂದು ಪ್ರಶ್ನಿಸಿದರು.
ಘಟಕದ ಅಧ್ಯಕ್ಷ ಸದಾಶಿವ ಶೆಟ್ಟಿ ಕೆ., ಮಾಜಿ ಮೇಯರ್ ಶಶಿಧರ ಹೆಗ್ಡೆ, ಗುಲ್ಜಾರ್ ಬಾನು, ಮಾಜಿ ಉಪಮೇಯರ್‌ಗಳಾದ ಬಶೀರ್ ಬೈಕಂಪಾಡಿ, ಬಶೀರ್ ಅಹ್ಮದ್, ಅಶೋಕ್ ಕೃಷ್ಣಾಪುರ, ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ಪ್ರತಿಭಾ ಕುಳಾಯಿ, ಮಾಜಿ ದೇವೇಂದ್ರ, ಗಣೇಶ್ ಪೂಜಾರಿ, ಮಾಜಿ ಅಧ್ಯಕ್ಷ ಕೇಶವ ಸನಿಲ್, ಉಪಾಧ್ಯಕ್ಷ ಗೋವರ್ದನ್ ಶೆಟ್ಟಿಗಾರ್, ಶ್ಯಾಮ್ ಸುಂದರ್, ರಾಜೇಶ್ ಕುಳಾಯಿ, ಆನಂದ ಅಮೀನ್, ರೇಷ್ಮಾ ಕಾಟಿಪಳ್ಳ, ಸೊಹೈಲ್ ಕಂದಕ್, ಅನಿಲ್ ಕುಮಾರ್, ಪದ್ಮನಾಭ ಅಮೀನ್, ಲಕ್ಷ್ಮಣ್ ಸುವರ್ಣ, ಹರೀಶ್ ಬೈಕಂಪಡಿ, ಜಲೀಲ್ ಕೃಷ್ಣಾಪುರ, ಶಂಶದ್, ಹ್ಯಾರಿಸ್ ಬೈಕಂಪಾಡಿ, ಹೇಮಂತ್ ಕುಮಾರ್, ಹಂಝ ಇಡ್ಯಾ ಮೊದಲಾದವರು ಉಪಸ್ಥಿತರಿದ್ದರು.
ದುರಸ್ತಿ ಭಾಗ್ಯ ಲಭಿಸಿಲ್ಲ
ಮಾಜಿ ಶಾಸಕ ಮೊದಿನ್ ಬಾವಾ ಮಾತನಾಡಿ, ರಸ್ತೆ ಕೆಟ್ಟು ಹೋಗಿ ಇಷ್ಟು ದಿನಗಳಾದರೂ ಇಲ್ಲಿನ ಶಾಸಕರಿಗೆ, ಸಂಸದರಿಗೆ ಜನರ ನೋವು ಅರ್ಥವಾಗಿಲ್ಲ. ಸರಕಾರವನ್ನು ಎಚ್ಚರಿಸಲು ಪ್ರತಿಭಟನೆ ಮಾಡಿದ್ದೇವೆ. ನಾನು ಐದು ವರ್ಷ ಶಾಸಕನಾಗಿದ್ದಾಗ ಎಷ್ಟು ಮಳೆ ಬಂದರೂ ದುರಸ್ತಿ ಮಾಡಲು ಒತ್ತಡ ಹೇರಿ ಜನಸಂಚಾರಕ್ಕೆ ಅನುವು ಮಾಡಿದ್ದೆ. ಈಗ ಸಾವು-ನೋವುಗಳಾದರೂ ಸರಕಾರ ಸ್ಪಂದಿಸುತ್ತಿಲ್ಲ. ಮಳೆಗಾಲ ಮುಗಿದರೂ ದುರಸ್ತಿ ಭಾಗ್ಯ ಬಂದಿಲ್ಲ. ರಾಜ್ಯದಲ್ಲಿ ಸಂತ್ರಸ್ತರಿಗೆ ನೆರವು ಕೊಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಫಲವಾಗಿದ್ದಾರೆ ಎಂದರು.