Advertisement

ಚತುಷ್ಪಥಕ್ಕೆ ನೂರಾರು ಮರಗಳು ಬಲಿ

05:17 PM Jul 14, 2018 | Team Udayavani |

ಗದಗ: ಮರಗಳ ಸ್ಥಳಾಂತರಿಸುವ ಮೂಲಕ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸ್ಕೋಚ್‌ ಅವಾರ್ಡ್‌ಗೆ ಪಾತ್ರವಾಗಿದ್ದ ಜಿಲ್ಲಾಡಳಿತ, ಇದೀಗ ಗದಗ- ಜಿಲ್ಲಾಸ್ಪತ್ರೆ ನಡುವೆ ಚತುಷ್ಪಥ ನಿರ್ಮಾಣಕ್ಕಾಗಿ ನೂರಾರು ಮರಗಳನ್ನು ನೆಲಕ್ಕುರುಳಿಸುತ್ತಿದೆ!

Advertisement

ನಗರದ ಹುಡ್ಕೋ ಕಾಲೋನಿ ಅಂಬಾ ಭವಾನಿ ದೇವಸ್ಥಾನದಿಂದ ಮಲ್ಲಸಮುದ್ರ ರಸ್ತೆಯ ಅಂಜುಮನ್‌ ಕಾಲೇಜು ಸಮೀಪದ ಪೆಟ್ರೋಲ್‌ ಬಂಕ್‌ ವರೆಗೆ ಕೇಂದ್ರ ಸರಕಾರದ ಸಿಆರ್‌ಎಫ್‌ ಯೋಜನೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆಗಳಿಂದ ಸುಮಾರು 4 ಕಿಮೀ ಉದ್ದದಷ್ಟು ರಸ್ತೆಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪೈಕಿ ಸಿಆರ್‌ಎಫ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 1,840 ಮೀಟರ್‌ ಉದ್ದ, ಎಸ್‌ಎಚ್‌ಡಿಬಿ ವತಿಯಿಂದ 1.3 ಕಿಮೀ, ಲೋಕೋಪಯೋಗಿ ಇಲಾಖೆ ಅನುದಾನದಡಿ 0.57 ಕಿಮೀ ರಸ್ತೆಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.

ಚತುಷ್ಪಥ ಮಧ್ಯ ಭಾಗದಲ್ಲಿ ವಿಭಜಕ, ರಸ್ತೆಯ ಒಂದು ಮಗ್ಗುಲಲ್ಲಿ ಪಾದಚಾರಿ, ಸೈಕಲ್‌ ಪಥ ಹಾಗೂ ಹಸಿರೀಕರಣಕ್ಕೆ 2 ಮೀಟರ್‌ ರಸ್ತೆ ಮೀಸಲಿರಿಸಲು ಉದ್ದೇಶಿಸಿದೆ. ಅದಕ್ಕಾಗಿ ಅಂಬಾಭವಾನಿ ದೇವಸ್ಥಾನದಿಂದ ಅಂಜುಮನ್‌ ಕಾಲೇಜು ಸಮೀಪದ ಪೆಟ್ರೋಲ್‌ ಬಂಕ್‌ ವರೆಗೆ ಸದ್ಯ 5.5 ಮೀಟರ್‌ ಅಗಲವಿರುವ ರಸ್ತೆಯನ್ನು 18 ಮೀಟರ್‌ ರಸ್ತೆಯನ್ನಾಗಿ ಉನ್ನತೀಕರಿಸಲಾಗುತ್ತಿದೆ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾತು.

ಹುಸಿಯಾಯ್ತಿ ಸ್ಥಳಾಂತರದ ನಿರೀಕ್ಷೆ: ಹುಬ್ಬಳ್ಳಿ-ಗದಗ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ 400ಕ್ಕೂ ಹೆಚ್ಚು ಮರಗಳನ್ನು ಕಳೆದ ವರ್ಷವಷ್ಟೇ ಜಿಲ್ಲಾಡಳಿತ, ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಿ ಸ್ಥಳಾಂತರಿಸಿದ್ದರು. ಈ ಮೂಲಕ ರಾಷ್ಟ್ರೀಯ ಮಟ್ಟದ ಪುರಸ್ಕಾರದ ಗೌರವಕ್ಕೆ ಪಾತ್ರವಾಗಿತ್ತು.

ಹೀಗಾಗಿ ಅದೇ ಮಾದರಿಯಲ್ಲಿ ಇಲ್ಲಿನ ಬೃಹತ್‌ಗಳನ್ನೂ ಸ್ಥಳಾಂತರಿಸಲಾಗುತ್ತದೆ ಎಂಬ ಪರಿಸರ ಪ್ರೇಮಿಗಳ ನಿರೀಕ್ಷೆ ಹುಸಿಯಾಗಿದೆ. ಈ ಮಾರ್ಗದಲ್ಲಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗುತ್ತಿರುವ ಸುಮಾರು 300ಕ್ಕೂ ಹೆಚ್ಚು ಮರಗಳನ್ನು ಕಳೆದ ಹದಿನೈದು ತಿಂಗಳಿಂದ ನಿರಂತರವಾಗಿ ನೆಲಕ್ಕುರುಳಿಸಲಾಗುತ್ತಿವೆ. ಈಗಾಗಲೇ ಮರಗಳನ್ನು ಕಡಿಯಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದ್ದು, ವಿವಿಧ ಯಂತ್ರೋಪಕರಗಳು ಹಾಗೂ ಕೊಡಲಿ ಪೆಟ್ಟಿಗೆ ಹೊಂಗೆ, ಆಲದಮರ ಬೇವು, ಹುಣಸೆಮರ ಸೇರಿದಂತೆ ಇನ್ನಿತರೆ ಬಗೆಯ ದೊಡ್ಡ ಮರಗಿಡಗಳು ಬಲಿಯಾಗುತ್ತಿವೆ. ಅಲ್ಲದೇ, ಮರಗಳ ರಕ್ಷಣೆಗಾಗಿ ಪುರಸ್ಕಾರ ಪಡೆದ ಜಿಲ್ಲಾಡಳಿತದ ನೆರಳಲ್ಲೇ ಮರಗಳ ಮಾರಣ ಹೋಮ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

Advertisement

ಅಭಿವೃದ್ಧಿ ಕಾಮಗಾರಿಗಳಿಗಾಗಿ ತೆರವುಗೊಳಿಸುವ ಒಂದು ಮರಕ್ಕೆ ಪರಿಹಾರವಾಗಿ 10 ಮರಗಳನ್ನು ಬೆಳೆಸಬೇಕು ಎಂಬುದು ಅರಣ್ಯ ಇಲಾಖೆ ನಿಯಮ. ಅದಕ್ಕೆ ತಗುಲುವ ವೆಚ್ಚವನ್ನು ಈಗಾಗಲೇ ಅರಣ್ಯ ಇಲಾಖೆಗೆ ಭರಿಸಲಾಗಿದೆ. ಇದಾದ ಬಳಿಕವಷ್ಟೇ ಮರಗಳನ್ನು ಕಡಿಯಲು ಟೆಂಡರ್‌ ನೀಡಲಾಗಿದೆ. 
 ದೇವರಾಜ ಹಿರೇಮಠ, ಪಿಡಬ್ಲ್ಯೂಡಿ ಅಭಿಯಂತರ 

ಈ ಹಿಂದೆ ಹುಬ್ಬಳ್ಳಿ- ಗದಗ ಮಾರ್ಗದಲ್ಲಿ ಮರಗಳ ಸ್ಥಳಾಂತರಕ್ಕೆ ತಗುಲಿದ ಖರ್ಚು-ವೆಚ್ಚವನ್ನು ಜಿಲ್ಲಾಡಳಿತವೇ ನಿಭಾಯಿಸಿತ್ತು. ಅರಣ್ಯ ಇಲಾಖೆ ಕೇವಲ ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಿತ್ತು. ಅರಣ್ಯ ಇಲಾಖೆಯಲ್ಲೂ ಈ ಬಗ್ಗೆ ಯಾವುದೇ ಯೋಜನೆಯಿಲ್ಲ. ಅಲ್ಲದೇ, ಮುಳಗುಂದ ಮಾರ್ಗದ ಮರಗಳ ಸ್ಥಳಾಂತರ ಕುರಿತು ಜಿಲ್ಲಾಡಳಿತದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾವನೆ ಸಲ್ಲಿಕೆಯಾದರೆ, ಮರಗಳ ಸ್ಥಳಾಂತರಕ್ಕೆ ನಾವು ಸಿದ್ಧರಿದ್ದೇವೆ.
ಕಿರಣ ಅಂಗಡಿ, ಗದಗ ವಲಯ ಅರಣ್ಯಾಧಿಕಾರಿ.

ವೀರೇಂದ್ರ ನಾಗಲದಿನ್ನಿ 

Advertisement

Udayavani is now on Telegram. Click here to join our channel and stay updated with the latest news.

Next