Advertisement
ಟ್ರಂಪ್ ಮೇಲಿರುವ ಆರೋಪಗಳೇನು?
Related Articles
Advertisement
ಟ್ರಂಪ್ ಎಸ್ಟೇಟ್‌ನಲ್ಲಿ ಸಿಕ್ಕ ದಾಖಲೆಗಳು
ಅಮೆರಿಕದ ಪರಮಾಣುಕಾರ್ಯಕ್ರಮದ ದಾಖಲೆ
ಅಮೆರಿಕ ಮತ್ತು ಇತರ ದೇಶಗಳ ರಕ್ಷಣ ಮತ್ತು ಶಸ್ತ್ರಾಸ್ತ್ರಗಳ ಮಾಹಿತಿ
ಅಮೆರಿಕ ಮತ್ತು ಸ್ನೇಹಿ ದೇಶಗಳ ಮೇಲಿನ ಸಂಭಾವ್ಯ ದಾಳಿಗಳ ಕುರಿತ ಮಾಹಿತಿ
ವಿದೇಶಿ ಶಕ್ತಿಯೊಂದು ದಾಳಿ ಮಾಡಿದರೆ ಅದರಿಂದ ತಪ್ಪಿಸಿಕೊಳ್ಳುವ ಕುರಿತ ಯೋಜನಾ ಮಾಹಿತಿ
ಟ್ರಂಪ್ ಮೇಲೆ ಹೊರಿಸಿರುವ ಆರೋಪಗಳು
ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ರಕ್ಷಣ ಮಾಹಿತಿ ಸಂಗ್ರಹ : ಈ ಆರೋಪವನ್ನು ಟ್ರಂಪ್ ಅವರ ಮೇಲಷ್ಟೇ ಹೊರಿಸಲಾಗಿದೆ. ರಕ್ಷಣ ಇಲಾಖೆಗೆ ಸೇರಿದ 31 ಕಡತಗಳನ್ನು ಸಂಗ್ರಹಿಸಿ ಇಟ್ಟ ಕಾರಣದಿಂದಾಗಿ ಈ ಆರೋಪ.
ನ್ಯಾಯ ನೀಡಿಕೆಗೆ ತೊಂದರೆ : ಟ್ರಂಪ್ ಮತ್ತು ಆಪ್ತ ನಾಟ್ ಮತ್ತಿತರರ ಮೇಲೆ ಈ ಆರೋಪ ಹೊರಿಸಲಾಗಿದೆ. ನ್ಯಾಯಾಧೀಶರಿಗೂ ಸಿಗದಂತೆ ಈ ದಾಖಲೆಗಳನ್ನು ಎತ್ತಿ ಇಟ್ಟಿದ್ದರು ಎಂಬ ಆರೋಪವಿದೆ.
ರಹಸ್ಯ ದಾಖಲೆಗಳ ಮುಚ್ಚಿಟ್ಟ ಆರೋಪ : ವಕೀಲರನ್ನು ದಾರಿ ತಪ್ಪಿಸಿದ್ದ ಟ್ರಂಪ್ ಮತ್ತು ನಾಟ್ ತಮ್ಮಲ್ಲಿದ್ದ ರಹಸ್ಯ ದಾಖಲೆಗಳ ಬಾಕ್ಸ್‌ಗಳನ್ನು ಬೇರೆಡೆ ವರ್ಗಾಯಿಸಿದ್ದರು. ಇವುಗಳನ್ನು ಗ್ರಾಂಡ್ ಜ್ಯೂರಿಗೆ ಸಿಗದಂತೆ ಮಾಡಿದ್ದರು.
ಎಫ್ಬಿಐಗೆ ದಾರಿ ತಪ್ಪಿಸಿದ ಆರೋಪ : ಎಫ್ಬಿಐ ಅವರು ಹೇಳಿದ ದಾಖಲೆಗಳನ್ನು ನೀಡದೇ ರಹಸ್ಯಗಳನ್ನು ಮುಚ್ಚಿಟ್ಟಿದ್ದರು. ತಮ್ಮಲ್ಲಿ ಯಾವುದೇ ದಾಖಲೆಇಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು.
ರವಾನೆಯಾಗಿದ್ದು ಯಾವಾಗ?
2020ರಲ್ಲಿ ಟ್ರಂಪ್ ಸೋತ ಮೇಲೆ ಶ್ವೇತಭವನವನ್ನು ಖಾಲಿ ಮಾಡಿದ್ದರು. ಅದೇ ಸಂದರ್ಭದಲ್ಲಿ 300ಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ತಮ್ಮೊಂದಿಗೆ ಎಸ್ಟೇಟ್ ಆದ ಮಾರ್ ಎ ಲಾಗೋಗೆ ತೆಗೆದುಕೊಂಡು ಹೋಗಿದ್ದರು. ಟ್ರಂಪ್ ಅವರ ಈ ಎಸ್ಟೇಟ್‌ನಲ್ಲಿರುವ ನಿವಾಸವನ್ನು ಪಾರ್ಟಿಗಳು ಸೇರಿದಂತೆ ಬೇರೆ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದರು.
ಆಗಾಗ ಸಾವಿರಾರು ಮಂದಿ ಇಲ್ಲಿ ಸೇರುತ್ತಿದ್ದರು. ಇಂಥ ಕಡೆಗಳಲ್ಲಿ ರಹಸ್ಯ ದಾಖಲೆಗಳನ್ನು ಇರಿಸಲಾಗಿತ್ತು ಎಂಬುದು ದೋಷಾರೋಪದಲ್ಲಿರುವ ಪ್ರಮುಖ ಆರೋಪ.
ಅಲ್ಲದೆ, ಇಂಥ ದಾಖಲೆಗಳನ್ನು ಇಡಲು ಅಥವಾ ಇಂಥ ದಾಖಲೆಗಳ ಬಗ್ಗೆ ಚರ್ಚೆ ಮಾಡಲು ಮಾರ್ ಎ ಲಾಗೋ ಸೂಕ್ತವಾದ ಸ್ಥಳವಾಗಿರಲಿಲ್ಲ.
ದಾಖಲೆ ಸಿಕ್ಕಿದ್ದು ಎಲ್ಲಿ?
ಟ್ರಂಪ್ ಅವರ ಎಸ್ಟೇಟ್‌ನ ಬಾಲ್‌ರೂಂ, ಸ್ನಾನದ ಕೋಣೆ, ಕಚೇರಿ ಮತ್ತು ಟ್ರಂಪ್ ಅವರ ಬೆಡ್‌ರೂಂನಲ್ಲಿಯ ರಹಸ್ಯ ದಾಖಲೆಗಳು ಸಿಕ್ಕಿವೆ. 2021ರಲ್ಲಿ ಟ್ರಂಪ್ ಅವರು ಈ ರಹಸ್ಯ ದಾಖಲೆಗಳನ್ನು ಯಾವುದೇ ಭದ್ರತಾ ಕ್ಲಿಯರೆನ್ಸ್ ಪಡೆಯದವರಿಗೂ ತೋರಿಸಿದ್ದರು. ಅಲ್ಲದೆ ಒಬ್ಬ ಲೇಖಕರು ಮತ್ತು ಇಬ್ಬರು ಕಚೇರಿ ಸಿಬಂದಿಗೂ ಈ ದಾಖಲೆಗಳನ್ನು ತೋರಿಸಲಾಗಿತ್ತು. ಅಲ್ಲದೆ ನ್ಯೂಜೆರ್ಸಿಯಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ ಇವರು ಕೆಲವು ಮಂದಿಗೆ ಅಮೆರಿಕದ ಮೇಲೆ ನಡೆಯಬಲ್ಲ ಸಂಭಾವ್ಯ ದಾಳಿಗಳ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದರು. ಈ ದಾಖಲೆಗಳನ್ನು ಅಮೆರಿಕದ ರಕ್ಷಣ ಇಲಾಖೆ, ತಯಾರಿಸಿಕೊಟ್ಟಿತ್ತು. ಅಧ್ಯಕ್ಷರು ಮಾತ್ರ ಇಂಥ ದಾಖಲೆ ಗಳನ್ನು ಬಹಿರಂಗಪಡಿಸಬಹುದು. ಈಗಲೂ ಈ ದಾಖಲೆಗಳು ರಹಸ್ಯವಾಗಿವೆ. ಆದರೆ ನನ್ನ ಬಳಿಯೂ ಇವೆ ಎಂದಿದ್ದರು.
FBI ತನಿಖೆಗೆ ಅಡ್ಡಿ
ಕಾಣೆಯಾದ ದಾಖಲೆಗಳ ಕುರಿತಂತೆ ಎಫ್ಬಿಐ ತನಿಖೆ ನಡೆಸುತ್ತಿದೆ. ಆದರೆ ಟ್ರಂಪ್ ತನಿಖೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ಅಲ್ಲದೆ ತನಿಖಾಧಿಕಾರಿಗಳು ಕೇಳಿದಾಗ, ನಮ್ಮಲ್ಲಿ ಯಾವ ದಾಖಲೆಗಳು ಇಲ್ಲ ಎಂದು ಎಫ್ಬಿಐಗೆ ಹೇಳಿದರೆ ಒಳ್ಳೆಯದಲ್ಲವೇ ಎಂದು ಅವರ ವಕೀಲರೊಬ್ಬರ ಜತೆಗೂ ಟ್ರಂಪ್ ಚರ್ಚಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಇದೇ ಮಂಗಳವಾರ ಟ್ರಂಪ್, ಫ್ಲೋರಿಡಾದ ಮಿಯಾಮಿಯಲ್ಲಿ
ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಶಿಕ್ಷೆ ಏನಾಗಬಹುದು?
ಟ್ರಂಪ್ ಮೇಲಿರುವ ಎಲ್ಲ ಆರೋಪಗಳು ಸಾಬೀತಾದರೆ ಅವರಿಗೆ 2.50 ಲಕ್ಷ ಡಾಲರ್ ದಂಡ ಮತ್ತು 20 ವರ್ಷಗಳ ವರೆಗೆ ಜೈಲುಶಿಕ್ಷೆಯಾಗಬಹುದು.
ಎರಡನೇ ದೋಷಾರೋಪ
ಇದು ಟ್ರಂಪ್ ಅವರ ಮೇಲೆ ಹೊರಿಸುತ್ತಿರುವ ಮೊದಲ ದೋಷಾರೋಪ ಅಲ್ಲ. ಮಾರ್ಚ್‌ನಲ್ಲಿ ವಯಸ್ಕರ ಚಿತ್ರದ ಮಾಜಿ ತಾರೆಯೊಬ್ಬರಿಗೆ ಅಕ್ರಮವಾಗಿ ಹಣ ನೀಡಿ ರಹಸ್ಯವಾಗಿರುವಂತೆ ಹೇಳಿದ್ದರು. 2016ರಲ್ಲಿ ಟ್ರಂಪ್ ಅವರು ಹಣ ನೀಡಿದ್ದರು.
ಟ್ರಂಪ್ ನೇಮಕ ಮಾಡಿದ್ದ ಜಡ್ಜ್ರಿಂದಲೇ ವಿಚಾರಣೆ
ವಿಶೇಷವೆಂದರೆ, ಟ್ರಂಪ್ ಅವರ ಮೇಲಿನ ಈ ಆರೋಪಗಳ ಕುರಿತಂತೆ ಟ್ರಂಪ್ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ನ್ಯಾಯಾಧೀಶರಾದ ಎಲೀನ್ ಕ್ಯಾನನ್ ವಿಚಾರಣೆ ನಡೆಸಲಿದ್ದಾರೆ. ಇವರು ಟ್ರಂಪ್ ಅವರ ರೆಸಾರ್ಟ್ ಮೇಲೆ ದಾಳಿ ಮಾಡುವಂತೆ ಎಫ್ಬಿಐಗೆ ಆದೇಶ ನೀಡಿದ್ದರು. ಆದರೆ ಈಗ ಕ್ಯಾನನ್ ವಿಚಾರಣೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.
2024ರ ಚುನಾವಣೆ ಮೇಲೆ ಪರಿಣಾಮ?
ಟ್ರಂಪ್ ಮೇಲಿನ ಆರೋಪ ಸಂಬಂಧ ತ್ವರಿತವಾಗಿ ವಿಚಾರಣೆ ನಡೆಸಲು ಕೋರ್ಚ್ ನಿಶ್ಚಯಿಸಿದೆ. ಇದಕ್ಕಾಗಿ ಕೋರ್ಟ್‌ನ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಅಲ್ಲದೆ ಸದ್ಯ ಅಧ್ಯಕ್ಷ ಗಾದಿ ಸ್ಪರ್ಧೆಯಿಂದ ಟ್ರಂಪ್ ಹಿಂದುಳಿಯುವಂತೆ ಮಾಡುವಂತಿಲ್ಲ. ಅವರು ಚುನಾವಣ ಕಣದಲ್ಲಿ ಇರಬಹುದು. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ಇಡೀ ಪ್ರಕರಣ ಉಲ್ಟಾ ಆಗಬಹುದು. ಏಕೆಂದರೆ ಟ್ರಂಪ್ ಅವರ ನಿಯಂತ್ರಣಕ್ಕೆ ಕಾನೂನು ವಿಭಾಗ ಬರುವುದರಿಂದ ಇಡೀ ಕೇಸನ್ನೇ ರದ್ದು ಮಾಡಬಹುದು.
ಟ್ರಂಪ್ ಜೈಲಿಗೆ ಹೋಗುತ್ತಾರಾ?
ವಿಚಾರಣೆ ಇನ್ನಷ್ಟೇ ಆರಂಭವಾಗಬೇಕು. ಒಂದು ವೇಳೆ ಕೇಸಿನಲ್ಲಿ ಟ್ರಂಪ್ ಅಪರಾಧಿ ಎಂದು ಸಾಬೀತಾದರೆ ಅವರಿಗೆ ಜೈಲು ಶಿಕ್ಷೆಯೂ ಗ್ಯಾರಂಟಿಯಾಗುತ್ತದೆ. ಆದರೆ ಟ್ರಂಪ್ ಜೈಲಿಗೆ ಹೋಗಲೇಬೇಕು ಅಂತೇನಿಲ್ಲ. ಮುಂದೆ ಬರುವ ಅಧ್ಯಕ್ಷರು, ಇವರ ಮೇಲಿನ ಶಿಕ್ಷೆ ರದ್ದು ಮಾಡಬಹುದು.
ಹೀಗೆ ಆಗದೇ ಜೈಲಿಗೆ ಹೋದರೂ ಅವರ ಜತೆಗಿರುವ ಸಿಕ್ರೇಟ್ ಸರ್ವೀಸ್ ಅಲ್ಲಿಗೂ ಹೋಗಿ ಭದ್ರತೆ ಕೊಡಬೇಕಾಗುತ್ತದೆ. ಅಮೆರಿಕದ ನಿಯಮಗಳ ಪ್ರಕಾರ, ಅಮೆರಿಕದ ಮಾಜಿ ಅಧ್ಯಕ್ಷರ ಭದ್ರತಾ ಹೊಣೆ, ಈ ಸಿಕ್ರೇಟ್ ಸರ್ವೀಸ್‌ಗೆ ಸೇರಿದೆ.