ಚಿಕ್ಕಮಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ಸುಟ್ಟು ಕರಕಲಾಗಿರುವ ಘಟನೆ ತರೀಕೆರೆ ತಾಲೂಕಿನ ಶಿವಪುರ ಸಮೀಪ ನಡೆದಿದೆ.
ಬಿರು ಬೇಸಿಗೆ ಹಿನ್ನೆಲೆಯಲ್ಲಿ ಬದುಗಳಿಗೆ ಹಚ್ಚಿದ ಬೆಂಕಿ ಹತ್ತಾರು ಎಕರೆ ತೋಟಕ್ಕೆ ಆವರಿಸಿ ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರಗಳು ಸುಟ್ಟು ಕರಕಲಾಗಿವೆ.
ಆಕಸ್ಮಿಕ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ತರೀಕೆರೆಯ ಶಿವಪುರ ತೋಟದಲ್ಲಿ ಬೆಂಕಿಗಾಹುತಿಯಾಗಿವೆ. ಖ್ಯಾತ ಶ್ರೀಗಂಧ ಬೆಳೆಗಾರ ವಿಶುಕುಮಾರ್ ತೋಟದಲ್ಲಿ ಈ ಬೆಂಕಿ ಅನಾಹುತ ನಡೆದಿದ್ದು, ಇದೇ ವೇಳೆ ಹನಿ ನೀರಾವರಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪ್ ಗಳು ಸಹಾ ಬೆಂಕಿಗಾಹುತಿ ಯಾಗಿವೆ.
ಬದುಗಳಿಗೆ ಬೆಂಕಿ ಹಚ್ಚಿದಾಗ ಅದು ಆಕಸ್ಮಿಕವಾಗಿ ತೋಟಕ್ಕೆ ಆವರಿಸಿರುವ ಶಂಕೆ ವ್ಯಕ್ತವಾಗಿದ್ದು, ನೂರಾರು ಮರಗಳು ಸುಟ್ಟು ಕರಕಲಾಗಿ, ಲಕ್ಷಾಂತರ ರೂ. ನಷ್ಟ, ಉಂಟಾಗಿದೆ ಎಂದು ಬೆಳೆಗಾರ ವಿಶುಕುಮಾರ್ ತಿಳಿಸಿದ್ದಾರೆ.
ಘಟನೆ ಸಂಬಂಧ ಅರಣ್ಯ ಇಲಾಖೆಗೆ ದೂರು ಸಹ ನೀಡಲಾಗಿದೆ. ಬೇಸಿಗೆ ಸಮೀಪಿಸುತ್ತಿರುವ ಹೊತ್ತಲ್ಲೇ ಜಿಲ್ಲೆಯಲ್ಲಿ ಅಗ್ನಿ ಅನಾಹುತ ಗಳು ದಿನೆ ದಿನೇ ಹೆಚ್ಚುತ್ತಿವೆ.