Advertisement

ಐಸ್‌ಕ್ಯಾಂಡಿ ಸೇವಿಸಿದ ನೂರಾರು ಮಂದಿ ಅಸ್ವಸ್ಥ

01:06 AM Mar 26, 2019 | sudhir |

ಸಿದ್ದಾಪುರ: ಐಸ್‌ಕ್ಯಾಂಡಿ ಸೇವಿಸಿದ 100ಕ್ಕೂ ಅಧಿಕ ಮಂದಿ ಜ್ವರ, ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡ ಘಟನೆ ಸೋಮವಾರ ಕುಂದಾಪುರ ತಾಲೂಕಿನ ಹೆಂಗವಳ್ಳಿ ಮತ್ತು ಬೆಳ್ವೆ ಪರಿಸರದಲ್ಲಿ ಸಂಭವಿಸಿದೆ.

Advertisement

ಹೆಂಗವಳ್ಳಿ ಗ್ರಾಮದ ಹೆಂಗವಳ್ಳಿ, ತೊಂಭತ್ತು, ಹಣೆಜೆಡ್ಡು, ಬೆಳ್ವೆ ಗ್ರಾಮದ ಬೆಳ್ವೆ, ಗುಮ್ಮೊàಲ, ಗೋಳಿಯಂಗಡಿ, ಆರ್ಡಿ ಪರಿಸರದಲ್ಲಿ ಶನಿವಾರ ಹಾಗೂ ರವಿವಾರ ಬೈಕ್‌ಗಳಲ್ಲಿ ಬಂದ ಹೊರ ಜಿಲ್ಲೆಯ ವ್ಯಕ್ತಿಗಳು ಮನೆ ಮನೆಗೆ ತೆರಳಿ ಐಸ್‌ಕ್ಯಾಂಡಿ ಮಾರಾಟ ಮಾಡಿದ್ದರು. ಅವುಗಳನ್ನು ಸೇವಿಸಿದ ಹಿರಿಯರು, ಮಕ್ಕಳು ಅಸ್ವಸ್ಥಗೊಂಡರು. ಕೆಲವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದರೆ ಮತ್ತೆ ಕೆಲವರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಜೇಶ್ವರಿ ಅವರು ಮುತುವರ್ಜಿ ವಹಿಸಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಸಿಬಂದಿಗೆ ಸೂಚಿಸಿದ್ದಾರೆ. ದಾಖಲಾದವರ ಮಲವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕುಂದಾಪುರದಲ್ಲಿ ಮಕ್ಕಳ ವೈದ್ಯಾಧಿಕಾರಿ ಡಾ| ಸುಜಾತಾ ಚಿಕಿತ್ಸೆ ನೀಡಿದ್ದು ಆರೋಗ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ನಿಗಾ ವಹಿಸಿದ್ದಾರೆ. ಮೂವರ ಸ್ಥಿತಿಯಲ್ಲಿ ಏರುಪೇರು ಇದ್ದು 48 ತಾಸಿನ ಹೆಚ್ಚಿನ ನಿಗಾ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತುರ್ತು ಕ್ರಮ
ಬೆಳ್ವೆ ಆಸ್ಪತ್ರೆಗೆ ಧಾವಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ, 24 ತಾಸು ವೈದ್ಯರ ಸೇವೆಗಾಗಿ ಹಟ್ಟಿಯಂಗಡಿ ವೈದ್ಯರನ್ನು ನಿಯೋಜಿಸಿದ್ದಾರೆ. ಬೆಳ್ವೆಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ
ಅವರ ವಾಹನ ಸೇರಿದಂತೆ ಇತರ ವಾಹನಗಳಲ್ಲಿ ಅಸ್ವಸ್ಥ ಮಕ್ಕಳನ್ನು ಕರೆದೊಯ್ಯಲು ಕ್ರಮ ಕೈಗೊಂಡಿದ್ದಾರೆ. 108 ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಲುಷಿತ ಐಸ್‌ಕ್ಯಾಂಡಿ ಮಾರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Advertisement

ಭೇಟಿ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರಾದ ಶೋಭಾ ಶೆಟ್ಟಿ ಮತ್ತು ಜ್ಯೋತಿ, ಮಾಜಿ ಅಧ್ಯಕ್ಷ ಉದಯಕುಮಾರ ಪೂಜಾರಿ, ಶಂಕರನಾರಾಯಣ ಮತ್ತು ಅಮಾಸೆಬೈಲು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. ಇಲ್ಲಿಯ ತನಕ ಪೊಲೀಸ್‌ ಕೇಸು ದಾಖಲಾಗಿಲ್ಲ.

ನಡೆದದ್ದೇನು?
ಹಿಂದಿ ಭಾಷೆ ಮಾತನಾಡುವ ವ್ಯಕ್ತಿಗಳು ಐಸ್‌ಕ್ಯಾಂಡಿ ಮಾರಾಟಕ್ಕೆ ಬರುವುದು ಇತ್ತೀಚಿನ ದಿನಗಳಲ್ಲಿ ಇಲ್ಲಿ ಸಾಮಾನ್ಯ. ಅದರಂತೆ ಶನಿವಾರ, ರವಿವಾರವೂ ಬಂದು ಮಾರಾಟ ಮಾಡಿ ತೆರಳಿದ್ದರು. ಶನಿವಾರವೇ ಅಸ್ವಸ್ಥರಾದ ಸುಮಾರು 75 ಮಂದಿ ಗೋಳಿಯಂಗಡಿಯ 2 ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇನ್ನೂ ಕೆಲವರು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕಿನ ಇತರ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 42 ಮಂದಿ ಚಿಕಿತ್ಸೆಗಾಗಿ ಬಂದಿದ್ದು 18 ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಲಾಗಿದೆ. ಮೂವರು ಮಕ್ಕಳು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ, 7 ಮಕ್ಕಳು, ಇಬ್ಬರು ಹಿರಿಯರು ಕುಂದಾಪುರದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎಲ್ಲಿಯೂ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.

ತೊಂಭತ್ತು ಮೂಡುಬೆಟ್ಟು ಪರಿಸರದ ಒಂದೇ ಮನೆಯಲ್ಲಿ 9 ಮಂದಿ, ಗುಮ್ಮೊàಲದಲ್ಲಿ ಒಂದೇ ಮನೆಯಲ್ಲಿ ಐವರು, ಹಣೆಜೆಡ್ಡು ಸಮೀಪದ ಕಲ್ಲುಗುಂಡಿಯ ಒಂದೇ ಮನೆಯಲ್ಲಿ 7 ಜನ ಅಸ್ವಸ್ಥಗೊಂಡಿದ್ದಾರೆ.

ಯಾರೂ ಭಯ ಪಡುವ ಆವಶ್ಯಕತೆ ಇಲ್ಲ. ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಘಟನೆಯ ಬಗ್ಗೆ ಸಂಪೂರ್ಣ ನಿಗಾ ಇರಿಸಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಗುರುತು ಪರಿಚಯ ಇಲ್ಲದವರಿಂದ ಆಹಾರ ಸಾಮಗ್ರಿ ಖರೀದಿಸುವ ಮುನ್ನ ಜನತೆ ಎಚ್ಚರ ವಹಿಸಬೇಕು.
– ಡಾ| ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ

ಸಂಭಾವ್ಯ ಅನಾಹುತ ತಪ್ಪಿಸಲಾಗಿದೆ. ಎಲ್ಲರೂ ಆರೋಗ್ಯದಿಂದಿದ್ದಾರೆ.
ಐಸ್‌ಕ್ಯಾಂಡಿ ಮಾರಿ ದವರು ಯಾರೆಂದು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗುವುದು.
-ಡಾ| ಓಂಪ್ರಕಾಶ್‌, ಡಿಎಚ್‌ಒ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next