ಸುಬ್ರಹ್ಮಣ್ಯ: ವಾರ್ಷಿಕ ಜಾತ್ರೆಯ ಆಸುಪಾಸಿನ ಅವಧಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವತಿಯಿಂದ ವರ್ಷಂಪ್ರತಿ ಕುಮಾರಪರ್ವತದಲ್ಲಿ ನಡೆಯುವ ಕುಕ್ಕೆ ಲಿಂಗ ಪೂಜೆಯನ್ನು ಈ ಬಾರಿ ಇನ್ನಷ್ಟು ವಿಜೃಂಭಣೆಯಿಂದ ನಡೆಸಲು ದೇಗುಲದ
ಆಡಳಿತ ಮಂಡಳಿ ನಿರ್ಧರಿಸಿದೆ.
ಪೂಜೆ ನೆರವೇರಿಸುವ ಅರ್ಚಕರ ಜತೆ ವ್ಯವಸ್ಥಾಪನ ಸಮಿತಿ ಸದಸ್ಯರು, ನೂರಾರು ಮಂದಿ ಭಕ್ತರು ಡಿ. 6ರಂದು ಕುಮಾರ ಪರ್ವತದ ಕಡೆಗೆ ತೆರಳಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆಯಾದ ಬಳಿಕ ಅಪರಾಹ್ನ 2ಕ್ಕೆ ಯಾತ್ರೆ ಕ್ಷೇತ್ರದಿಂದ ಕುಮಾರ ಪರ್ವತದ ಕಡೆ ತೆರಳಲಿದೆ. ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯಾತ್ರೆಗೆ ತೆರಳುವ ಭಕ್ತರಿಗೆ ಶಾಲು ನೀಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ದೇಗುಲದ ಪೂವಾಭಿಮುಖವಾಗಿ ದೇವರ ಗದ್ದೆ ಮಾರ್ಗವಾಗಿ ತೆರಳುವ ಯಾತ್ರಾ ತಂಡ ಅಂದು ರಾತ್ರಿ ಗಿರಿಗದ್ದೆಯಲ್ಲಿ ತಂಗಲಿದೆ.
ಗಿರಿಗದ್ದೆಯಿಂದ ಡಿ. 7ರಂದು ಬೆಳಗ್ಗೆ 6.ಕ್ಕೆ ಯಾತ್ರೆ ಮುಂದುವರಿದು ಅಂದು ಬೆಳಗ್ಗೆ 11ಕ್ಕೆ ಯಾತ್ರೆ ಜತೆಗಿರುವ ದೇಗುಲದ ಅರ್ಚಕರಿಂದ ಕುಮಾರಪರ್ವತ ತಪ್ಪಲಿನಲ್ಲಿ ಪೂರ್ವ ಸಂಪ್ರದಾಯದಂತೆ ಕುಕ್ಕೆಲಿಂಗ ಪೂಜೆ ನಡೆಯಲಿದೆ. ಈ ಹಿಂದಿನ ವರ್ಷಗಳಲ್ಲಿ ಕುಕ್ಕೆ ಲಿಂಗ ಪೂಜೆ ನಡೆಯುತ್ತಿದ್ದರೂ ದೇಗುಲದ ಅರ್ಚಕರು ಹಾಗೂ ಇತರೆ ಕೆಲ ಮಂದಿ ಮಾತ್ರ ತೆರಳುತ್ತಿದ್ದರು. ಆದರೆ ಈ ಭಾರಿ ದೇಗುಲದ ವ್ಯವಸ್ಥಾಪನ ಸಮಿತಿ ಈ ಕುಕ್ಕೆಲಿಂಗ ಪೂಜೆ ಮತ್ತಷ್ಟು ವಿಜೃಂಭಣೆ ಮತ್ತು ಆಕರ್ಪಕವಾಗಿ ಜಾತ್ರೆ ರೂಪವಾಗಿ ಆಚರಿಸಲು ನಿರ್ಧರಿಸಿರುವುದು ಭಕ್ತರಲ್ಲಿ ಹರ್ಷ ತಂದಿದೆ.
ಸ್ಥಳೀಯ ಹಾಗೂ ಸುತ್ತಮುತ್ತಲಿನ ನೂರಕ್ಕು ಹೆಚ್ಚು ಭಕ್ತರು ಯಾತ್ರೆಯಲ್ಲಿ ತೆರಳುತಿದ್ದು, ಅವರೆಲ್ಲರಿಗೂ ಗಿರಿಗದ್ದೆಯಲ್ಲಿ ಊಟ ಹಾಗೂ ಉಪಾಹಾರ ವ್ಯವಸ್ಥೆ ಯನ್ನು ದೇಗುಲದ ವತಿಯಿಂದಲೇ ಮಾಡಲಾಗುತ್ತಿದೆ. ಕುಕ್ಕೆ ಲಿಂಗ ಪೂಜೆಯನ್ನು ಮುಂಬರುವ ವರ್ಷಗಳಲ್ಲಿ ಮತ್ತಷ್ಟೂ ವಿಜೃಂಭಣೆ ಯಿಂದ ನಡೆಸಲು ಚಿಂತಿಸಲಾಗಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.