ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸೃಷ್ಟಿಯಾದ ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಂದಾಜು ಒಂದು ನೂರು ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿದೆ.
ಕೃಷಿ ಬೆಳೆಗೆ ಸಂಬಂಧಿಸಿ 73.21 ಕೋಟಿ ರೂ., ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ 10.30 ಕೋಟಿ ರೂ., ರೇಷ್ಮೆ ಬೆಳೆಗೆ ಸಂಬಂಧಿಸಿ 10.43 ಲಕ್ಷ ರೂ. ಸೇರಿದಂತೆ ಒಟ್ಟು 83.61 ಕೋಟಿ ರೂ. ಹಾಗೂ ಮಣ್ಣು ಹಾನಿ ಸೇರಿ ಅಂದಾಜು ನೂರು ಕೋಟಿ ರೂ.ಗಳಿಗೂ ಅಧಿಕ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಪ್ರಾಥಮಿಕ ವರದಿ ಸಿದ್ಧಪಡಿಸಿದೆ.
ಜಿಲ್ಲೆಯಲ್ಲಿ 87618 ಹೆಕ್ಟೇರ್ ಕೃಷಿ ಬೆಳೆ ಪ್ರದೇಶ ಹಾನಿಯಾಗಿದ್ದರೆ, 8215 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶ ಹಾನಿಯಾಗಿದೆ. 53.84 ಹೆಕ್ಟೇರ್ ರೇಷ್ಮೆ ಬೆಳೆ, 30 ರೇಷ್ಮೆ ಸಾಕಾಣಿಕೆ ಮನೆಗಳು, 3450 ಮೊಟ್ಟೆಗಳು ಹಾನಿಯಾಗಿವೆ. ಬಿತ್ತನೆಯಾದ ಒಟ್ಟು 3,11,462 ಹೆಕ್ಟೇರ್ ಕೃಷಿ ಬೆಳೆಗಳಲ್ಲಿ 87,681 ಹೆಕ್ಟೇರ್ ಪ್ರದೇಶದ ಬೆಳೆ, 44,481ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 8215 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ತಾಲೂಕಾವಾರು ಕೃಷಿ ಹಾನಿ: ಹಾವೇರಿ ತಾಲೂಕಿನಲ್ಲಿ ಬಿತ್ತನೆಯಾದ 55410 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 9742 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿ 662 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ 41,526 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 18,010 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿ 1843 ಲಕ್ಷ ರೂ. ನಷ್ಟವಾಗಿದೆ. ಶಿಗ್ಗಾವಿ ತಾಲೂಕಿನಲ್ಲಿ 36933 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 26,047 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿ 2315 ಲಕ್ಷ ರೂ. ಹಾನಿಯಾಗಿದೆ. ಬ್ಯಾಡಗಿ ತಾಲೂಕಿನ 30,292 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 7994 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು 591 ಲಕ್ಷ ರೂ. ಗಳಷ್ಟು ನಷ್ಟವಾಗಿದೆ. ಹಿರೇಕೆರೂರು ತಾಲೂಕಿನಲ್ಲಿ 50,374 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಅದರಲ್ಲಿ 1653 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು 112 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ರಾಣಿಬೆನ್ನೂರು ತಾಲೂಕಿನಲ್ಲಿ 54,316 ಹೆಕ್ಟೇರ್ ಪ್ರದೇಶದಲ್ಲಿ 5349 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿ 508 ಲಕ್ಷ ರೂ.ಗಳಷ್ಟು ಹಾನಿಯಾಗಿದೆ.
ತಾಲೂಕಾವಾರು ತೋಟಗಾರಿಕೆ ಹಾನಿ: ಹಾವೇರಿ ತಾಲೂಕಿನ 13,721 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 3056 ಹೆಕ್ಟೇರ್‌ನ ಬೆಳೆ ಹಾಳಾಗಿದ್ದು ಅಂದಾಜು 426 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಹಾನಗಲ್ಲ ತಾಲೂಕಿನ 5915 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಯಲ್ಲಿ 1144 ಹೆಕ್ಟೇರ್‌ಗಳಷ್ಟು ಬೆಳೆ ಹಾಳಾಗಿ 159 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಸವಣೂರು ತಾಲೂಕಿನ 2596 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 606 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು 84.33 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಶಿಗ್ಗಾವಿ ತಾಲೂಕಿನ 5151 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 265 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿ 22.64 ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ.
ಬ್ಯಾಡಗಿ ತಾಲೂಕಿನಲ್ಲಿ 1492 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಯಲ್ಲಿ 619 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು ಹಾನಿ ಮೌಲ್ಯ 75.73 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಹಿರೇಕೆರೂರು ತಾಲೂಕಿನ 2868 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 616 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು 89.19 ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ. ರಾಣಿಬೆನ್ನೂರು ತಾಲೂಕಿನ 13105 ಹೆಕ್ಟೇರ್ ತೋಟಗಾರಿಕೆ ಪ್ರದೇಶದಲ್ಲಿ 1908 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು 180 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ.
2550 ಹೆಕ್ಟೇರ್ ಮಣ್ಣು ಹಾನಿ!: ಇದಲ್ಲದೇ ನದಿ ಪ್ರವಾಹದಿಂದ ಮಣ್ಣು ತುಂಬಿಕೊಂಡು 2616 ಹೆಕ್ಟೇರ್ ಕೃಷಿ ಭೂಮಿ ಹಾಗೂ ನೆರೆಯಿಂದ ಮಣ್ಣು ಕೊಚ್ಚಿ ಹೋಗಿ 2550 ಹೆಕ್ಟೇರ್‌ನಷ್ಟು ಮಣ್ಣು ಹಾನಿಯಾಗಿದೆ. ಹಾನಿಯಾಗಿರುವ ಬೆಳೆಗಳಲ್ಲಿ ಮೆಕ್ಕೆಜೋಳ, ಹತ್ತಿ, ಭತ್ತ, ಶೇಂಗಾ, ಕಬ್ಬು ಹಾಗೂ ಸೊಯಾಬಿನ್ ಪ್ರಮುಖವಾಗಿವೆ. ಈ ಬಾರಿ ಮುಂಗಾರು ವಿಳಂಬವಾಗಿದ್ದರಿಂದ ಜುಲೈ ಎರಡನೇ ವಾರದಲ್ಲಿ ಒಟ್ಟು 311462 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಇದರಲ್ಲಿ 1.93 ಲಕ್ಷ ಹೆಕ್ಟೇರ್ ಮೆಕ್ಕೆಜೋಳ, 51,097 ಹೆಕ್ಟೇರ್ ಹತ್ತಿ, 33,282 ಹೆಕ್ಟೇರ್ ಭತ್ತ, 19,085 ಹೆಕ್ಟೇರ್ ಶೇಂಗಾ, 6618 ಹೆಕ್ಟೇರ್ ಕಬ್ಬು, 9083 ಹೆಕ್ಟೇರ್ ಸೊಯಾಬಿನ್ ಬಿತ್ತನೆಯಾಗಿತ್ತು. ಬಿತ್ತಿದ ಎರಡೇ ವಾರದಲ್ಲಿ ಅತಿವೃಷ್ಟಿ ಹಾಗೂ ನೆರೆ ಬಂದು ಶೇ.40ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
•ಎಚ್.ಕೆ. ನಟರಾಜ