ಬೆಂಗಳೂರು: “ಇಂದಿರಾ ಕ್ಯಾಂಟೀನ್’ ಮೂಲಕ ವಿತರಿಸಲಾದ ಊಟ-ತಿಂಡಿಯ ಬಿಲ್ ಪಾವತಿಯಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಕೇಟರಿಂಗ್ ಸೇವೆ ಪಡೆದ ಗುತ್ತಿಗೆದಾರರಿಗೆ ಈವರೆಗೆ ಪಾವತಿಸಲಾದ ಮೊತ್ತವೇ 8.53 ಕೋಟಿ ರೂ. ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು.
ಇದುವರೆಗೆ 154 ಇಂದಿರಾ ಕ್ಯಾಂಟೀನ್‌ಗಳಿಗೆ 76,150 ತಿಂಡಿ, 76,450 ಮಧ್ಯಾಹ್ನದ ಊಟ ಹಾಗೂ 44,250 ರಾತ್ರಿ ಊಟ ಸೇರಿ ಒಟ್ಟಾರೆ ತಿಂಗಳಿಗೆ 1,96,950 ಊಟ-ತಿಂಡಿ ವಿತರಿಸಲಾಗಿದೆ. ಸರ್ಕಾರ ಪ್ರತಿ ತಿಂಡಿಗೆ 9.50 ರೂ. ಹಾಗೂ ಊಟಕ್ಕೆ 11.25 ರೂ. ಸಬ್ಸಿಡಿ ನೀಡುತ್ತಿದೆ. ಎಲ್ಲ ಸೇರಿ ಗುತ್ತಿಗೆದಾರರಿಗೆ ತಿಂಗಳಿಗೆ 6.24 ಕೋಟಿ ರೂ. ಪಾವತಿಸಬೇಕಾಗುತ್ತದೆ.
ನಗರದ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡು, ವರ್ಷಕ್ಕೆ ಪಾವತಿಸುವ ಸಬ್ಸಿಡಿ ಲೆಕ್ಕಹಾಕಿದರೂ ನೂರು ಕೋಟಿ ರೂ. ದಾಟುವುದಿಲ್ಲ. ವಾಸ್ತವ ಹೀಗಿರುವಾಗ, ಆಗಸ್ಟ್ 16ರಿಂದ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ನಲ್ಲಿ ನೂರಾರು ಕೋಟಿ ಅಕ್ರಮ ನಡೆಯಲು ಹೇಗೆ ಸಾಧ್ಯ ಎಂದು ಮಂಜುನಾಥ ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಅಷ್ಟೇ ಅಲ್ಲ, ತಿಂಡಿ-ಊಟ ಪೂರೈಕೆಯಾದ ತಕ್ಷಣ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗುವುದಿಲ್ಲ. ಕ್ಯಾಂಟೀನ್‌ಗಳಿಗೆ ಇಂಡೆಂಟ್ ನೀಡಿದ ನಂತರ ಅದು ಸಾರ್ವಜನಿಕರಿಗೆ ನಿಗದಿತ ಪ್ರಮಾಣದಲ್ಲಿ ವಿತರಣೆ ಆಗುತ್ತಿದೆಯೇ ಎನ್ನುವುದು ಸೇರಿದಂತೆ ಮೂರು ಹಂತಗಳಲ್ಲಿ ತಪಾಸಣೆ ನಡೆಯುತ್ತದೆ.
ಇದಕ್ಕಾಗಿ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಜತೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಗಣಿಸಿದ ನಂತರವಷ್ಟೇ ಬಿಲ್ ಪಾವತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ ಇಂದಿರಾ ಕ್ಯಾಂಟೀನ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಕಂಡುಬಂದರೆ, ನೇರವಾಗಿ ನನ್ನ ಗಮನಕ್ಕೆ ತರಬಹುದು. ಸಲಹೆಗಳಿಗೂ ಸ್ವಾಗತ ಎಂದು ಆಯುಕ್ತರು ತಿಳಿಸಿದರು.
26ರಂದು ಮೊಬೈಲ್ ಕ್ಯಾಂಟೀನ್ ಶುರು: ಗಣರಾಜ್ಯೋತ್ಸವಕ್ಕೆ ನಗರದಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳ ಸೇವೆ ಆರಂಭವಾಗಲಿದೆ. ಜ.26ರಂದು ವಿಧಾನಸೌಧ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.
ಈಗಾಗಲೇ 154 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳದ ಲಭ್ಯತೆ ಇಲ್ಲದ ಕಡೆಗಳಲ್ಲಿ ಮೊಬೈಲ್ ಕ್ಯಾಂಟೀನ್ ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ. 24 ಮೊಬೈಲ್ ಕ್ಯಾಂಟೀನ್‌ಗಳು ನಗರದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.