Advertisement

ಬೆಳ್ಮಣ್‌: 108 ಆ್ಯಂಬುಲೆನ್ಸ್‌ ಗೆ ನೂರಾರು ಮನವಿ

10:39 AM Sep 06, 2022 | Team Udayavani |

ಬೆಳ್ಮಣ್‌: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಮುಖ ಜಂಕ್ಷನ್‌ಗಳಲ್ಲೊಂದಾದ ಬೆಳ್ಮಣ್‌ ಭಾಗಕ್ಕೆ ಸುಸಜ್ಜಿತ 108 ಆ್ಯಂಬುಲೆನ್ಸ್‌ನ ಅಗತ್ಯ ಇದೆ ಎಂದು ನೂರಾರು ಮನವಿಗಳಿದ್ದರೂ ಸಕಾರಾತ್ಮಕ ಸ್ಪಂದನೆ ಇಲ್ಲದಿರುವುದು ಈ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತೀ ದಿನ ಹಲವಾರು ಸಾವು ನೋವು ಸಂಭಂವಿಸುತ್ತಿರುವ ಬೆಳ್ಮಣ್‌ ಪರಿಸರಕ್ಕೆ ಆ್ಯಂಬುಲೆನ್ಸ್‌ನ ಅಗತ್ಯವಿದೆ ಎಂಬ ಕೂಗು ಬಲವಾಗಿದೆ.

Advertisement

ಒಮ್ಮೆ ಮಂಜೂರಾಗಿತ್ತು

ಕಳೆದ ಹಲವು ವರ್ಷಗಳ ಹಲವರ ಇಚ್ಚಾಶಕ್ತಿಯ ಫಲವಾಗಿ ಬೆಳ್ಮಣ್‌ಗೆ ಮಂಜೂರಾಗಿದ್ದ ಆ್ಯಂಬುಲೆನ್ಸ್‌ ಎಲ್ಲಿ ಹೋಯಿತು ಎಂಬ ಯಕ್ಷ ಪ್ರಶ್ನೆ ಗ್ರಾಮಸ್ಥರರಾಗಿದೆ. ಪ್ರಮುಖ ಪೇಟೆ ಪ್ರದೇಶವಾದ ಬೆಳ್ಮಣ್‌ ಪರಿಸರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುರ್ತು ಸಂದರ್ಭ ಹಾಗೂ ಅಪಘಾತ ನಡೆಯುವ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಈ ಭಾಗದ ಗ್ರಾಮಸ್ಥರ ಒತ್ತಾಸೆಗೆ 2014ರಲ್ಲಿ ಬೆಳ್ಮಣ್‌ ಭಾಗಕ್ಕೆ 108 ಆ್ಯಂಬುಲೆನ್ಸ್‌ ಸರ್ಕಾರದಿಂದ ಮಂಜೂರಾಗಿತ್ತು. ಈ ಕಾರಣಕ್ಕಾಗಿ ಈ ಭಾಗದ ಗ್ರಾಮಸ್ಥರು ಹರ್ಷಗೊಂಡಿದ್ದರು ಆದರೆ ಈ ಖುಷಿ ಅದು ಬಹುದಿನ ಉಳಿಯದೇ ಒಂದೇ ವಾರಕ್ಕೆ ಬಂದ ಆ್ಯಂಬುಲೆನ್ಸ್‌ ವಿವಿಧ ಜನಪ್ರತಿನಿಧಿಗಳ ರಾಜಕೀಯದ ಗುದ್ದಾಟಕ್ಕೆ ಮಾಯವಾಯಿತು.

ಈ ಭಾಗದ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಇಲಾಖೆ 2014ರಲ್ಲಿ ಬೆಳ್ಮಣ್‌ ಭಾಗಕ್ಕೆ 108 ಆ್ಯಂಬುಲೆನ್ಸ್‌ ಮಂಜೂರಾಗಿತ್ತು. ಕೆಲವೇ ದಿನಕ್ಕೆ ಹೊಸ ವಾಹನ ಬೇರೆಡೆಗೆ ಕಳುಹಿಸಿ ಬೆಳ್ಮಣ್‌ ಗೆ ಹಳೆಯ ಆ್ಯಂಬುಲೆನ್ಸ್ ಹಾಕಲಾಗಿತ್ತು. ಈ ಕಾರಣಕ್ಕಾಗಿ ಬೆಳ್ಮಣ್‌ ಭಾಗದ ನಾಗರಿಕರು ಹಾಗೂ ರಾಜಕೀಯ ನಾಯಕರು ಕಾರ್ಯಕರ್ತರು ಸೇರಿಕೊಂಡು ಪ್ರತಿಭಟನೆಯನ್ನೂ ನಡೆಸಿದರೂ ಆದರೂ ಯಾವುದೇ ಪ್ರಯೋಜವಾಗಿಲ್ಲ. ಪ್ರತಿಭಟನೆಯ ಪರಿಣಾಮ ಹಳೆಯ ವಾಹನವೂ ಬೆಳ್ಮಣ್‌ನಲ್ಲಿ ನಿಲ್ಲದೆ ಬಳಿಕ ಅಂದಿನ ಕಾಪು ಕ್ಷೇತ್ರದ ಸಚಿವರ ಕ್ಷೇತ್ರವಾದ ಶಿರ್ವಕ್ಕೆ ವರ್ಗಾವಣೆ ಗೊಂಡಿತು. ಹೀಗಾಗಿ ಬೆಳ್ಮಣ್‌ ಭಾಗಕ್ಕೆ ಮಂಜೂರಾದ 108 ವಾಹನ ರಾಜಕೀಯ ಗುದ್ದಾಟಕ್ಕೆ ಮಾಯವಾಗಿತು.

ಇಲ್ಲಿ ಅಪಘಾತ ನಿರಂತರ

Advertisement

ಬೆಳ್ಮಣ್‌, ಮುಂಡ್ಕೂರು, ಬೋಳ, ಕೆದಿಂಜೆ ಹಾಗೂ ನಂದಳಿಕೆ ಗ್ರಾಮಗಳಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು. ಇಲ್ಲಿನ ಗಾಯಳುಗಳನ್ನು ಸಾಗಿಸಲು ಇಲ್ಲಿನ ಜನ ನಿತ್ಯ ಕಷ್ಟ ಪಡುವಂತಾಗಿದೆ. ಅಪಘಾತಗಳು ನಡೆದಾಗ ಗಾಯಾಲುಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಉರುಳಾಡುವಂತಾಗಿದೆ. ಪ್ರಸ್ತುತ ಶಿರ್ವ ಆಥವಾ ಕಾರ್ಕಳ ಭಾಗದಿಂದ ಆ್ಯಂಬುಲೆನ್ಸ್‌ ಬರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜನ ಗೋಳಿಡುತ್ತಿದ್ದಾರೆ. ಹೀಗಾಗಿ ಕೆಲವೊಂದು ತುರ್ತು ಸಂದರ್ಭ ವಾಹನ ಸಿಗದೆ ಅನೇಕ ಸಾವು ನೋವುಗಳು ಸಂಭವಿಸುತ್ತಿದೆ. ಇತ್ತೀಚೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಬದುಕಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ ಸರಿಯಾದ ವೇಳೆದ ವಾಹನ ಸಿಗದೆ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಮಾವಿನಕಟ್ಟೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಯುವಕರಿಬ್ಬರೂ ಸಾವನ್ನಪ್ಪಿದಾಗಲೂ ಸರಿಯಾದ ಸಂದರ್ಭಕ್ಕೆ 108 ಆ್ಯಂಬುಲೆನ್ಸ್‌ ಸಿಗಲಿಲ್ಲ. ಹೀಗಾಗಿ ಆ್ಯಂಬುಲೆನ್ಸ್‌ ಇಲ್ಲದೆ ಈ ಭಾಗದಲ್ಲಿ ಅನೇಕ ಎಡವಟ್ಟುಗಳು ನಡೆಯುತ್ತಿದ್ದು ಬೆಳ್ಮಣ್‌ ಭಾಗಕ್ಕೊಂದು ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು ಒದಗಿಸಿ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ‌

ವ್ಯವಸ್ಥೆ ಮಾಡಿ: ಬೆಳ್ಮಣ್‌ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಅಪಘಾತಗಳು ಹಾಗೂ ತುರ್ತು ಸಂದರ್ಭ 108 ಆ್ಯಂಬುಲೆನ್ಸ್‌ ಸೇವೆ ದೊರಕುತ್ತಿಲ್ಲ. ಆ್ಯಂಬುಲೆನ್ಸ್‌ವಾಹನ ಸಿಗದೆ ಗಾಯಳುಗಳು ರಸ್ತೆಯಲ್ಲೇ ನರಳಾಡುವಂತಾಗಿದೆ. ಕೂಡಲೇ ಈ ಭಾಗಕ್ಕೊಂದು ಆ್ಯಂಬುಲೆನ್ಸ್‌ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಬೇಕಾಗಿದೆ. –ಸರ್ವಾಣಿ ಶೆಟ್ಟಿ, ಗ್ರಾಮಸ್ಥೆ

ಇಲಾಖೆ ಮೌನ: ಹಿಂದೆ ಇಲ್ಲಿ ಮಂಜೂರಾದ 108 ಆ್ಯಂಬುಲೆನ್ಸ್‌ ರಾಜಕೀಯ ಗುದ್ದಾಟದಿಂದ ಸ್ಥಳಾಂತರಗೊಂಡಿದೆ. ಆದರೆ ಇಲ್ಲಿ ನಿತ್ಯ ಸಾವು ನೋವು ಸಂಭವಿಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಮಾತ್ರ ಮೌನವಾಗಿದೆ. –ಮುರಳಿ ಜಂತ್ರ, ನಾಗರಿಕ

ಮಂಜೂರಿಗೆ ಪ್ರಯತ್ನ: ಈ ಭಾಗದ ಜನರ ಬಹುಬೇಡಿಕೆಯನ್ನು ಸಚಿವರಾಗಿ ಪ್ರಮುಖ ಆದ್ಯತೆ ಎಂದು ಪರಿಗಣಿಸಿ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿ ಆ್ಯಂಬುಲೆನ್ಸ್‌ಮಂಜೂರಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. –ಸುನಿಲ್‌ ಕುಮಾರ್‌, ಸಚಿವರು

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next