Advertisement

ನೂರಾರು ಎಕರೆ ಗೋಮಾಳ ಭೂಮಾಫಿಯಾಗೆ?

03:44 PM Oct 16, 2019 | Suhan S |

ಕೋಲಾರ: ತಾಲೂಕಿನ ಹೊಳಲಿ ಗ್ರಾಮದ ಬಳಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಜಾಗ ಹಸ್ತಾಂತರವಾಗುತ್ತಿದ್ದಂತೆಯೇ ಸುತ್ತಮುತ್ತಲ ನೂರಾರು ಎಕರೆ ಗೋಮಾಳ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ, ಕಬಳಿಸಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಅಧಿಕಾರಿಗಳು ಮತ್ತು ಬೆಂಗಳೂರಿನ ಭೂಮಾಫಿಯಾ ವ್ಯಕ್ತಿಗಳು ಹೊಳಲಿ ಗೋಮಾಳ ಜಮೀನಿನ ಕಬಳಿಕೆಯಲ್ಲಿ ಭಾಗಿಯಾಗಿದ್ದು, ಸಾರ್ವಜನಿಕರಿಂದ ಬಂದ ದೂರುಗಳ ಮೇರೆಗೆ ಉಪವಿಭಾಗಾಧಿಕಾರಿ ಯವರು ಹೊಳಲಿ ಗ್ರಾಮದ ಸರ್ವೆ ಸಂಖ್ಯೆ 103ರ ಗೋಮಾಳ ಜಮೀನಿಗೆ ಸಂಬಂಧ ಪಟ್ಟಂತೆ ಸಮಗ್ರ ವರದಿ ನೀಡುವಂತೆ ತಹಶೀ ಲ್ದಾರ್‌ಗೆ ಪತ್ರ ಬರೆದು ಸೂಚಿಸಿದ್ದಾರೆ.

422 ಎಕರೆ ಗೋಮಾಳ: ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಸರ್ವೇ ಸಂಖ್ಯೆ 103ರ ವ್ಯಾಪ್ತಿಗೆ 422 ಎಕರೆ ಭೂಮಿಒಳಪಡುತ್ತದೆ. ಈ ಜಮೀನಿನಲ್ಲಿ ಸ್ವಲ್ಪ ಭಾಗವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲು ಮಂಜೂರು ಮಾಡುವಂತೆ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ ಐದಾರು ವರ್ಷಗಳಿಂದಲೂ ಪ್ರಯತ್ನ ಪಡುತ್ತಿದೆ. ಹೊಳಲಿ ಗೋಮಾಳ ಜಮೀನಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗುವುದರಿಂದ ಸುತ್ತಮುತ್ತಲ ಜಮೀನಿಗೆ ಬಂಗಾರದ ಬೆಲೆ ಬರುತ್ತದೆ ಎಂದು ನಿರೀಕ್ಷಿಸಿದ್ದ ಬೆಂಗಳೂರಿನ ಭೂಮಾಫಿಯಾದಾರರು, ಭೂಕಬಳಿಕೆಗಾಗಿ ತಮ್ಮೆಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ಭೂ ಮಂಜೂರಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭೂ ಮಾಫಿಯಾದ ಆಮಿಷಕ್ಕೆ ತುತ್ತಾಗಿದ್ದ ಕೋಲಾರ ತಾಲೂಕಿನ ಕೆಲವು ತಹಶೀಲ್ದಾರ್‌ಗಳು ಭೂಕಬಳಿಕೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಾಥ್‌ ನೀಡಿರುವ ಆರೋಪಗಳಿವೆ.

ತನಿಖೆಗೆ ಡಿ.ಕೆ.ರವಿ ಆದೇಶ: ಕೋಲಾರ ಹೊಳಲಿ ಗೋಮಾಳ ಜಮೀನಿನಲ್ಲಿ 16 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎರಡು ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದ ಜಿಲ್ಲಾಧಿಕಾರಿ ಡಿ.ಕೆ.ರವಿ ಗಮನಕ್ಕೆ ಭೂಕಬಳಿಕೆದಾರರ ಕೃತ್ಯಗಳು ಬಂದಿದ್ದವು. ಅವರು ಆಗಲೇ ಸೂಕ್ತ ತನಿಖೆ ಕೈಗೊಳ್ಳುವಂತೆ ಕೋಲಾರ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದರು.  ಆದರೆ, ಕೋಲಾರ ತಹಶೀ ಲ್ದಾರ್‌ಗಳ ಪೈಕಿ ಕೆಲವರು ಈ ಭೂಮಾಫಿಯಾ ಕೃತ್ಯದಲ್ಲಿ ಭಾಗಿದಾರ ರಾಗಿದ್ದರಿಂದ ತಹಶೀಲ್ದಾರ್‌ ಹಂತದಲ್ಲಿ ಹೊಳಲಿ ಗೋಮಾಳ ಭೂಕಬಳಿಕೆ ಕುರಿತು ತನಿಖೆ ನಡೆಯಲೇ ಇಲ್ಲ ಎನ್ನಲಾಗುತ್ತಿದೆ.

ಕ್ರೀಡಾಂಗಣಕ್ಕೆ ಭೂ ಮಂಜೂರು: ಕೆಲವು ತಿಂಗಳುಗಳ ಹಿಂದಷ್ಟೇ ಜಿಲ್ಲಾಧಿಕಾರಿ ಜೆ. ಮಂಜುನಾಥ್‌, ಹೊಳಲಿ ಗೋಮಾಳ ಜಮೀನಿನ 16 ಎಕರೆ ಪ್ರದೇಶವನ್ನು ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದೆ ಎಂದು ಘೋಷಿಸಿ, ಪತ್ರಗಳನ್ನು ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ಗೆ ಹಸ್ತಾಂತರಿಸಿದ್ದರು. ಇವೆಲ್ಲಾ ಘಟನಾವಳಿಗಳು ನಡೆಯುತ್ತಿರುವಾಗಲೇ, 150 ಎಕರೆ ಗೋಮಾಳ ಜಮೀನು ಅಕ್ರಮವಾಗಿ ಪರಭಾರೆಯಾಗಿದೆ ಎಂದು ತಿಳಿದು ಬಂದಿದೆ. ನಕಲಿ ದಾಖಲೆಗಳ ಮೂಲಕ ಗೋಮಾಳ ಜಮೀನು ಖರೀದಿಸಿದ್ದವರು ತಮ್ಮ ಶಕಾನುಸಾರ ಪಡೆದುಕೊಂಡಿರುವ ಜಮೀನಿಗೆ ಈಗ ಕಾಂಪೌಂಡ್‌, ಬೇಲಿ ಹಾಕಿಕೊಂಡು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ತಾತ್ಕಾಲಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ತಾವು ಅಕ್ರಮವಾಗಿ ನಕಲಿ ದಾಖಲೆಗಳ ಮೂಲಕ ಸಂಪಾದಿಸಿಕೊಂಡಿರುವ ಜಮೀನು ಮಾರಾಟಕ್ಕೂ ಇಟ್ಟಿದ್ದಾರೆ.

Advertisement

ಭೂ ಮಂಜೂರಿಗೆ ಸತತ ಪ್ರಯತ್ನ: ಕ್ರಿಕೆಟ್‌ ಕ್ರೀಡಾಂಗಣಕ್ಕೆ ಜಮೀನು ಮಂಜೂರು ಮಾಡಿಸಿಕೊಳ್ಳಲು ಐದಾರು ವರ್ಷ ಪ್ರಯತ್ನ ಆಗಬೇಕಾದರೆ, ನಕಲಿ ದಾಖಲೆಗಳ ಮೂಲಕ ಜಮೀನು ಮಂಜೂರಾತಿ ಹೇಗೆ ಆಗಿದೆ ಎನ್ನುವುದು ಅನುಮಾನಕ್ಕೆ ಎಡೆ ಮಾಡಿದೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next