Advertisement

ನೂರಕ್ಕೆ ನೂರರಷ್ಟು ಪ್ರಾಮಾಣಿಕನಲ್ಲ

11:53 AM Feb 28, 2018 | Team Udayavani |

ಬೆಂಗಳೂರು: ನೂರಕ್ಕೆ ನೂರು ಪ್ರಾಮಾಣಿಕರಾಗಿ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ಹಾಗೆಯೇ ನಾನೂ ಕೂಡ ನೂರಕ್ಕೆ ನೂರು ಪ್ರಾಮಾಣಿಕನಲ್ಲ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್‌ ನುಡಿಗಳನ್ನಾಡಿದರು.

Advertisement

ಎ.ಕೆ.ಸುಬ್ಬಯ್ಯ ಅಭಿನಂದನಾ ಸಮಿತಿಯಿಂದ ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎ.ಕೆ.ಸುಬ್ಬಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ದಾರಿದೀಪ, ಸೌಹಾರ್ದ ಸೆಲೆ, ದೇವರು ಮತ್ತು ಧರ್ಮ, ಆರ್‌ಎಸ್‌ಎಸ್‌ ಅಂತರಂಗ ಹಾಗೂ ಫೀನಿಕ್ಸ್‌ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಾಮಾಣಿಕವಾಗಿ ರಾಜಕಾರಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಹೀಗಾಗಿ ಯಾವ ರಾಜಕಾರಣಿಯೂ ನೂರಕ್ಕೆ ನೂರು ಪ್ರಾಮಾಣಿಕನಾಗಿರಲು ಸಾಧ್ಯವೇ ಇಲ್ಲ.

ಆದರೆ, ಸಿದ್ಧಾಂತ, ವಿಚಾರಧಾರೆಗೆ ರಾಜಿಯಾಗದೇ ರಾಜಕಾರಣ ಮಾಡಲು ಸಾಧ್ಯವಿದೆ. ಚುನಾವಣೆ ಗೆಲ್ಲಬೇಕಾದರೇ ಪ್ರಾಮಾಣಿಕ ರಾಜಕಾರಣ ನಡೆಯುವುದಿಲ್ಲ. ದುಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು, ದುಷ್ಟರಿಗೆ ಅಧಿಕಾರ ನೀಡದೇ ಇರಲು ಕೆಲವೊಮ್ಮೆ ಅಪ್ರಾಮಾಣಿಕರಾಗಬೇಕಾಗುತ್ತದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಎ.ಕೆ.ಸುಬ್ಬಯ್ಯ ಕೂಡ ಅಗ್ರಗಣ್ಯರು. ಬಿಜೆಪಿಯಿಂದ ಹೊರ ಬರುವವರೆಗೂ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ತತ್ವ, ಸಿದ್ಧಾಂತದಲ್ಲಿ ಎಂದಿಗೂ ರಾಜಿಮಾಡಿಕೊಂಡಿರಲಿಲ್ಲ ಎಂದು ಬಣ್ಣಿಸಿದರು.

Advertisement

ಸಾಹಿತಿ ದೇವನೂರ ಮಹದೇವ ಮಾತನಾಡಿ, ಕೆಲವು ಲೋಹವನ್ನು ಜ್ವಾಲಮುಖೀಯ ಶಾಖಕ್ಕೂ ಕರಗುವುದಿಲ್ಲ. ಎ.ಕೆ.ಸುಬ್ಬಯ್ಯ ಅವರು ಅಂತಹ ಲೋಹವಾಗಿದ್ದಾರೆ. ಮನುಷ್ಯ ತನ್ನನ್ನು ತಾನೂ ವಂಚಿಸಿಕೊಂಡಷ್ಟು ಬೇರೆ ಯಾರನ್ನೂ ವಂಚಿಸಿರಲು ಸಾಧ್ಯವಿಲ್ಲ. ನೇರ, ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಎ.ಕೆ.ಸುಬ್ಬಯ್ಯ ಅವರು ತಮ್ಮನ್ನು ವಿಮರ್ಶಿಸಿದವರಿಗೆ ಯಾವುದೇ ಹಾನಿ ಮಾಡಿಲ್ಲ ಎಂದರು.

ವಂಚನೆ ಮತ್ತು ದ್ರೋಹ ಲೋಕವನ್ನು ಆಳುತ್ತಿದೆ. ಮೋದಿಯವರು ಅಭಿನಯ ಮಾಡುತ್ತಾರೆ, ಅವರ ಮಾತಿಗೆ ಸುಳ್ಳು ಕೂಡ ನಾಚಿಹೋಗುತ್ತದೆ. ಬ್ಲ್ಯಾಕ್‌ವೆುçಲ್‌, ಸೂಫಾರಿ ನೀಡುವುದು, ಅಂಡರ್‌ವಲ್ಡ್‌ ರಾಜಕಾರಣವೇ ಎಲ್ಲೆಡೆ ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಗಣ್ಯರು ಸೇರಿ ಎ.ಕೆ.ಸುಬ್ಬಯ್ಯ ಅವರನ್ನು ಸನ್ಮಾನಿಸಿದರು.

ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮಾಜಿ ಸಚಿವ ಎಂ.ಸಿ.ನಾಣಯ್ಯ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಈ ಅಭಿನಂದನೆ ನಿರೀಕ್ಷಿತ ಅಥವಾ ಅಪೇಕ್ಷಿತವಾಗಿರಲಿಲ್ಲ. ಸಮಾಜ ಸತ್ವಶಾಲಿಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇದೊಂದು ಆಂದೋಲನದ ರೀತಿಯಲ್ಲಿ ಸಾಗಬೇಕು. ರಾಜಕೀಯ ಪಕ್ಷ ಮತ್ತು ಸಾರ್ವಜನಿಕ ವೇದಿಕೆಯನ್ನು ಎಂದೂ ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿಲ್ಲ. ಜನ ಸೇವೆಗಾಗಿ, ಹೋರಾಟದ ವೇದಿಕೆಗಾಗಿ ಪಕ್ಷ ಬದಲಿಸಿದ್ದೇನೆ.
-ಎ.ಕೆ.ಸುಬ್ಬಯ್ಯ, ಚಿಂತಕ

ವೈಯಕ್ತಿಕ ಜೀವನದಲ್ಲಿ ಆಕಾಂಕ್ಷೆ ಇಲ್ಲದೇ ಇದ್ದಾಗ ಮನುಷ್ಯ ನಿರ್ಭೀತನಾಗಿರುತ್ತಾನೆ. ರಾಜಕಾರಣಿಗಳು ಅನೇಕ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲರೂ ಪ್ರಾಮಾಣಿಕರು ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಂತ ಎಲ್ಲ ರಾಜಕಾರಣಿಗಳು ಭ್ರಷ್ಟರಲ್ಲ.
-ರಮೇಶ್‌ ಕುಮಾರ್‌, ಸಚಿವ

ಕೆ.ಎ.ಸುಬ್ಬಯ್ಯ ಮತ್ತು ನಾನು ಒಂದೇ ಕಾಲೇಜಿನಲ್ಲಿ ಓದಿದ್ದು, ಅವರ ಸೈದ್ಯಾಂತಿಕ ನಿಲುವು ಬದಲಾಗಿದೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರ ಸಿದ್ಧಾಂತಕ್ಕೆ ವಿರೋಧವಿದೆ. ಆದರೆ ಅವರ ಕೆಲಸಕ್ಕೆ ವಿರೋಧವಿಲ್ಲ.
-ಎಂ.ಸಿ.ನಾಣಯ್ಯ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next