ಬೇಕರಿ ಶುರುವಾದ ಹೊಸತರಲ್ಲಿ ಅಂಗಡಿ ಒಂದು ಗೋಡೌನ್ ಆಗಿತ್ತು. ಅಲ್ಲಿ ತಯಾರಾಗುತ್ತಿದ್ದ ಬಿಸಿ ಬಿಸಿ ಬನ್ನು, ಬಿಸ್ಕತ್ತುಗಳನ್ನು ಸಬೀರ್ ಅವರ ಮುತ್ತಾತ ಸೈಕಲ್ ಮೇಲೆ ಹೇರಿಕೊಂಡು ಮನೆ ಮನೆಗೂ ಮಾರಾಟ ಮಾಡುತ್ತಿದ್ದರಂತೆ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಬ್ರಿಟಿಷ್ ಸೈನಿಕರು, ಅಧಿಕಾರಿಗಳು ಬೇಕರಿಯ ರುಚಿಗೆ ಮನಸೋತು ಬಹಳ ಬೇಗ ಗ್ರಾಹಕರಾದರು.
ನಗರದಲ್ಲೊಂದು ನೂರು ವರ್ಷ ಹಳೆಯ ಬೇಕರಿ ಇದೆ. ಸರಿಯಾಗಿ ಹೇಳಬೇಕೆಂದರೆ 115 ವರ್ಷ! ಎಷ್ಟೋ ಜನ ಈ ಬೇಕರಿ ಮುಂದುಗಡೆಯೇ ಓಡಾಡಿದ್ದರೂ, ಅಲ್ಲಿ ಅನೇಕ ಸಾರಿ ತಮ್ಮಿಷ್ಟದ ತಿಂಡಿಗಳನ್ನು ಖರೀದಿಸಿದ್ದರೂ ಆ ಬೇಕರಿ ನೂರು ವರ್ಷ ಹಳೆಯದೆಂಬ ಸಂಗತಿ ತಿಳಿದಿರಲಿಕ್ಕಿಲ್ಲ. ಅಂದ ಹಾಗೆ ಈ ಬೇಕರಿ ಹೆಸರು ಆಲ್ಬರ್ಟ್ ಬೇಕರಿ. ಪ್ರೇಜರ್ ಟೌನಿನಲ್ಲಿ ಮೊಹಮ್ಮದ್ ಯಾಕೂಬ್ ಅವರು 1902ನೇ ಇಸವಿಯಲ್ಲಿ ಶುರು ಮಾಡಿದ ಬೇಕರಿಯನ್ನು ಇಂದಿನವರೆಗೂ ಕುಟುಂಬಸ್ಥರು ನಡೆಸಿಕೊಂಡು ಬಂದಿದ್ದಾರೆ. ಅವರ ನಂತರ ಮಗ ಮೊಹಮ್ಮದ್ ಇಬ್ರಾಹಿಂ, ಈಗ ಮೊಮ್ಮಗ ನವಾಬ್ ಜಾನ್ ಬೇಕರಿಯ ಪ್ರೊಪ್ರೈಟರ್ ಆಗಿದ್ದಾರೆ. ಸದ್ಯ ನವಾಬ್ ಅವರ ಮಗ ಸಬೀರ್ ಫೈಜಾನ್ ಕೂಡಾ ತಂದೆಗೆ ಬೇಕರಿ ನಿರ್ವಹಿಣೆಯಲ್ಲಿ ನೆರವಾಗುತ್ತಿದ್ದಾರೆ.
ಆಲ್ಬರ್ಟ್ ಹೆಸರಿನ ಹಿಂದೆಯೂ ಒಂದು ಕತೆಯಿದೆ. ಅದು ಇಂಗ್ಲೀಷರು ಬಾರತವನ್ನು ಆಳುತ್ತಿದ್ದ ಕಾಲವಾದ್ದರಿಂದ, ಬೇಕರಿಗೆ ಇಂಗ್ಲೀಷ್ ಹೆಸರಿಟ್ಟರೆ ಉಪಯೋಗ ಹೆಚ್ಚೆಂಬುದು ಸಬೀರರ ಮುತ್ತಾತನವರ ಯೋಚನೆ. ಈ ಉಪಾಯ ಫಲ ನೀಡಿತು ಕೂಡಾ. ಬ್ರಿಟಿಷ್ ಅಧಿಕಾರಿಗಳು, ಸೈನಿಕರು ಬಹಳಷ್ಟು ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರೆಲ್ಲರೂ ಬೇಕರಿಯ ಗ್ರಾಹಕರಾದರು. ಬೇಕರಿ ಶುರುವಾದ ಹೊಸತರಲ್ಲಿ ಅಂಗಡಿ ಒಂದು ಗೋಡೌನ್ ಆಗಿತ್ತು. ಅಲ್ಲಿ ತಯಾರಾಗುತ್ತಿದ್ದ ಬಿಸಿ ಬಿಸಿ ಬನ್ನು, ಬಿಸ್ಕತ್ತುಗಳನ್ನು ಸಬೀರ್ ಅವರ ಮುತ್ತಾತ ಸೈಕಲ್ ಮೇಲೆ ಹೇರಿಕೊಂಡು ಮನೆ ಮನೆಗೂ ಮಾರಾಟ ಮಾಡುತ್ತಿದ್ದರಂತೆ. ಬಿಸ್ಕತ್ತು- ಬನ್ನುಗಳ ಗುಣಮಟ್ಟ ಮತ್ತು ರುಚಿಗೆ ಬಹಳ ಬೇಗ ಗ್ರಾಹಕರು ಆಕರ್ಷಿತರಾಗಿದ್ದರಿಂದ ಬಹಳ ಬೇಗ ಖಾಲಿಯಾಗುತ್ತಿದ್ದವಂತೆ. ಹೀಗೆ ಸಣ್ಣ ಪ್ರಮಾಣದಲ್ಲಿ ಶುರುವಾದ ವ್ಯಾಪಾರ ಕೈಹಿಡಿದಿದ್ದರಿಂದ, ಗೋಡೌನ್‌ನಂತಿದ್ದ ಅಂಗಡಿ, ಚಿಕ್ಕ ಅವಧಿಯಲ್ಲಿಯೇ ಪರಿಪೂರ್ಣ ಬೇಕರಿಯಾಗಿ ಬದಲಾಯಿತು.
ಮಸೀದಿ ರಸ್ತೆಯಲ್ಲಿರುವ ಆಲ್ಬರ್ಟ್ ಬೇಕರಿ ಒಳಗೆ ಕಾಲಿಡುತ್ತಿದ್ದಂತೆ ಮುಂದುಗಡೆ ಇರಿಸಿರುವ ಥರಹೇವಾರಿ ಬಿಸ್ಕತ್ತುಗಳು ಕೈಬೀಸಿ ಕರೆಯುತ್ತವೆ. ಅಷ್ಟೇ ಅಲ್ಲದೆ ಕ್ರಸಾಂಟ್‌ಗಳು, ಪೇಸ್ಟ್ರಿ, ಕೇಕುಗಳ ಬಹಳಷ್ಟು ಸ್ವಾದಗಳೇ ಇಲ್ಲಿ ಲಭ್ಯವಿದ್ದು, ಅವೆಲ್ಲದರ ರುಚಿ ನೋಡಲು ಆಸೆಯಾದರೆ, ಯಾವುದೇ ಹಿಂಜರಿಕೆ ಬೇಡ. ಅಂದ ಹಾಗೆ ಅಲ್ಲಿಗೆ ಭೇಟಿ ಕೊಟ್ಟಾಗ ಉಪ್ಪಿನ ಬೆಣ್ಣೆ ಬಿಸ್ಕತ್ತು, ಚಾಕಲೇಟ್ ಲಾವಾ ಕೇಕ್, ಮೇಯೊ ರೋಲ್ಸ್, ಬನಾನಾ ಮತ್ತು ಗ್ರೇಪ್ಸ್ ಮಫಿನ್ ಮತ್ತು ಗಾರ್ಲಿಕ್ ಬ್ರೆಡ್ಡುಗಳನ್ನು ಕೊಳ್ಳಲು ಮರೆಯದಿರಿ. ಅವೆಲ್ಲವೂ ಇಲ್ಲಿನ ವಿಶೇಷತೆ.
ಮತ್ತೂಂದು ವಿಶೇಷತೆಯನ್ನು ಹೇಳುವುದನ್ನೇ ಮರೆತೆವು. ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರೂರಿಸುವಂಥ ವಿವಿಧ ಖಾದ್ಯಗಳನ್ನೂ ಇಲ್ಲಿ ತಯಾರಿಸುತ್ತಾರೆ. ಮಟನ್ ಖೀಮಾ ಸಮೋಸ, ಮಲಾಯಿ ಕಟ್ಲೆಟ್, ಕಾಕ್‌ಟೇಲ್ ಸಮೋಸ, ಖೋವ ನಾನ್, ಚಿಕನ್ ಪಫ್Õಗಳು ಇಲ್ಲಿಗೆ ಭೇಟಿ ನೀಡುವ ನಾನ್‌ವೆಜ್ ಪ್ರಿಯರ ಫೇವರಿಟ್ಟುಗಳು. ಇವನ್ನು ಹೊರತುಪಡಿಸಿ ಕ್ರಿಸ್‌ಮಸ್ ಸಮಯದಲ್ಲಿ ತಯಾರಾಗುವ ನಾನ್ ಆಲ್ಕೋಹಾಲಿಕ್ ಪ್ಲಮ್ ಕೇಕ್, ಹಾಟ್ ಕ್ರಾಸ್ ಬನ್‌ಗಳು ಇಲ್ಲಿನ ಖಾಯಂ ಗಿರಾಕಿಗಳಿಗೆ ಬಹಳ ಇಷ್ಟ.
ಎಲ್ಲಿ?: 93, ಮಸೀದಿ ರಸ್ತೆ, ಫ್ರೆಜರ್ ಟೌನ್
ಸಮಯ: ಮಧ್ಯಾಹ್ನ 3-ರಿಂದ ರಾತ್ರಿ 9
– ಸೌರಭ