ಕೋವಿಡ್ ಆತಂಕದ ಛಾಯೆಯ ನಡುವೆಯೇ ಬಿಡುಗಡೆಯಾಗಿ ತೆರೆಗೆ ಬಂದಿದ್ದ “5 ಅಡಿ 7 ಅಂಗುಲ’ ಚಿತ್ರ ಈಗ ಸದ್ದಿಲ್ಲದೆ ಶತದಿನದ ಪ್ರದರ್ಶನವನ್ನು ಪೂರ್ಣಗೊಳಿಸಿತು.
ಬೆಂಗಳೂರಿನ ಒರಿಯಾನ್ ಮಾಲ್‌ನ ಪಿ.ವಿ.ಆರ್. ನಲ್ಲಿ ನಡೆದ 100ನೇ ದಿವಸ ಪ್ರದರ್ಶನದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಪಿ. ಹೆಚ್ ವಿಶ್ವನಾಥ್, ಪಿ. ಶೇಷಾದ್ರಿ, ಗುರುಪ್ರಸಾದ್, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕ ವೆಂಕಟೇಶ್, ನಟ ಸಚಿನ್ ಮೊದಲಾದವರು ಹಾಜರಿದ್ದು, “5 ಅಡಿ 7 ಅಂಗುಲ’ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ನಿತ್ಯಾನಂದ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ “5 ಅಡಿ 7 ಅಂಗುಲ’ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು, “ಪ್ರೇಕ್ಷಕರು ಅಭಿಮಾನದಿಂದ ಸಿನಿಮಾ ನೋಡಿದ್ದು, ಚಿತ್ರ ಮಂದಿರಗಳ ಸಹಾಯದಿಂದ ನನ್ನ ಕನಸಿನ ಸಿನಿಮಾಕ್ಕೆ ಮೆಚ್ಚುಗೆ ಸಿಗುವಂತೆ ಆಗಿದೆ. ಇಂತಹ ಕೊರೋನಾ ಕಾಲದಲ್ಲಿ, ಶೇಕಡ 50 ಆಸನ ವ್ಯವಸ್ಥೆ ಇಟ್ಟುಕೊಂಡು 100 ದಿವಸ ಪೂರೈಸುವುದು ಕನಸಿನ ಮಾತೆ ಆಗಿತ್ತು. ಎಲ್ಲರ ಸಹಕಾರದಿಂದ ನಮ್ಮ ಕನಸು ನನಸಾಗಿದೆ’ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಹಿರಿಯ ನಿರ್ದೇಶಕ ಪಿ.ಹೆಚ್. ವಿಶ್ವನಾಥ್, “ಇಡೀ ಚಿತ್ರ ರಂಗವೇ ಬೇಷ್ ಅನ್ನುವ ಹಾಗೆ ಮತ್ತು ತಾಳ್ಮೆ, ಶ್ರದ್ಧೆ, ಗಾಡವಾದ ನಂಬಿಕೆ ಹೊತ್ತ ನಿತ್ಯಾನಂದ್ ಪ್ರಭು ಅವರ ಮೊದಲ ಪ್ರಯತ್ನದಲ್ಲಿ ದೇವರೇ ಹೆಜ್ಜೆ ಹಾಕಿದ್ದಾರೆ. ಯಾರೊಬ್ಬರು ಸಿನಿಮಾ ರಿಲೀಸ್ ಮಾಡಲು ಧೈರ್ಯ ಮಾಡದೆ ಇದ್ದಾಗ ನಿತ್ಯಾನಂದ ಪ್ರಭು ಅಂತಹವರು ಒಂದು ಬೆಂಚ್ ಮಾರ್ಕ್ ಹಾಕಿಕೊಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲಿ ಅವರು ಸಿನಿಮಾ ಬಿಡುಗಡೆ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ದೇಶಕ ಗುರುಪ್ರಸಾದ್, ನಿರ್ದೇಶಕ ಪಿ ಶೇಷಾದ್ರಿ ಮೊದಲಾದವರು “5 ಅಡಿ 7 ಅಂಗುಲ’ ಸಿನಿಮಾ ತಂಡಕ್ಕೆ ಅಭಿನಂದನೆಯ ಮಾತುಗಳನ್ನಾಡಿದರು