ಧಾರವಾಡ: ಯಾವ ದೇವಸ್ಥಾನಕ್ಕೆ ಹುಂಡಿಯಲ್ಲಿ ಹಣ ಬರುತ್ತದೆಯೋ ಆ ಹಣ ಆ ದೇವಸ್ಥಾನಕ್ಕೆ ಸೇರುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆಗೆ ಆದಾಯ ಸರ್ಕಾರಕ್ಕೆ ಬರುವ ಪ್ರಶ್ನೆ ಬರಲ್ಲ. ನಮ್ಮಲ್ಲಿರುವ 34,000 ದೇವಸ್ಥಾನಗಳಿವೆ. ಒಂದು ದೇವಸ್ಥಾನದಿಂದ ಇನ್ನೊಂದು ದೆವಸ್ಥಾನಕ್ಕೆ ಹಣ ವರ್ಗಾವಣೆ ಮಾಡಲು ಬರುವುದಿಲ್ಲ. ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತದೆ, ಆ ಹಣ ದೇವಸ್ಥಾನ ಅಭಿವೃದ್ದಿಗೆ ಸೀಮಿತ ಎಂದರು.
ಶಕ್ತಿ ಯೋಜನೆಯಿಂದ ದಟ್ಟಣೆ ಹೆಚ್ಚಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕು ವರ್ಷದಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ, ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಭವಾಗಿದೆ. ಆಗ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ಮೇಲಾಗಿದೆ, ಹೀಗಾಗಿ ಸ್ವಲ್ಪ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಈಗ ಹೊಸ ಬಸ್‌ಗಳು ಬರಲಿವೆ, ಆಗ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಆರೋಪ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ತಾವು ಕೆಲಸ ಮಾಡುವುದಿಲ್ಲ, ಕೆಲಸ ಮಾಡುವವರಿಗೂ ಬಿಡುವುದಿಲ್ಲ. ಕೆಲಸ ಆಗುವುದಕ್ಕೆ ಹರಕತ್ತು, ಆಗದೇ ಇರುವುದಕ್ಕೆ ಕುಮ್ಮಕ್ಕು ಅಂತಾರಲ್ಲ ಹಾಗಿದ್ದಾರೆ. ಅವರು ನಾಲ್ಕು ವರ್ಷದಿಂದ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಬಸ್ ನಿಲ್ದಾಣಗಳನ್ನು ಯಾಕೆ ಕಟ್ಟಲಿಲ್ಲ ಎಂದರು.
13888 ಸಿಬ್ಬಂದಿ ನಿವೃತ್ತರಾಗಿದ್ದರು, ನಾಲ್ಕು ವರ್ಷದಲ್ಲಿ ಒಂದೇ ಒಂದು ನೇಮಕಾತಿ ಮಾಡಲಿಲ್ಲ. ಇವತ್ತು ಪ್ರತಿ ದಿನ 60 ಲಕ್ಷ ಜನ ಹೆಣ್ಣು ಮಕ್ಕಳು ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಇದನ್ನು ಬಿಜೆಪಿಗೆ ತಡೆಯಲು ಆಗುತ್ತಿಲ್ಲ. ಅವರಿಗೆ ಹೊಟ್ಟೆ ಉರಿ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.