ಮೈಸೂರು: ಹುಣಸೂರು ಉಪಚುನಾವಣೆಯಲ್ಲಿ ಎಷ್ಟೇ ಕೋಟಿ ಖರ್ಚು ಮಾಡಿದರೂ ಜೆಡಿಎಸ್ ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗಿನ ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು.
ಹುಣಸೂರು ಕ್ಷೇತ್ರದಲ್ಲಿ ನೀವು ಗೆಲ್ಲಿಸಿದ ಅಭ್ಯರ್ಥಿ ಈಗ ನಮ್ಮ ಜೊತೆಗೆ ಇಲ್ಲ. ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಮತ್ತೆ ಹುಣಸೂರಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವಂತೆ ಹೋರಾಟ ಮಾಡಬೇಕು. ಕಾರ್ಯಕರ್ತರು, ಮುಖಂಡರು ಇದ್ದರೆ ಪಕ್ಷ ಉಳಿಯಲಿದೆ. ಪಕ್ಷ ಇದ್ದರೆ ಎಲ್ಲರೂ ಉಳಿಯುತ್ತಾರೆ.
ನೀವು ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದರೆ ಹುಣಸೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬಹುದು. ಯಾರು ಎಷ್ಟೇ ಹಣ ಖರ್ಚು ಮಾಡಲಿ-ಬಿಡಲಿ ನೀವು ಪಕ್ಷ ಉಳಿಸಲು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು. ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.
ಸರ್ಕಾರದ ಭವಿಷ್ಯ: ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಕನಿಷ್ಠ ಏಳೆಂಟು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಈ ಫಲಿತಾಂಶ ರಾಜ್ಯ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಎಂದು ಹೇಳಿದರು. ಕೋಡಿಮಠದ ಸ್ವಾಮೀಜಿ ನುಡಿದಿರುವ ಭವಿಷ್ಯದ ಬಗ್ಗೆ ನಾನು ಮಾತನಾಡಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಪಾಪದ ಹಣ ಸಂಗ್ರಹಣೆ ಮಾಡಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಂ.ಅಶ್ವಿನ್‌ಕುಮಾರ್, ಕೆ.ಮಹದೇವ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್, ಮಾಜಿ ಅಧ್ಯಕ್ಷೆ ನಯೀಮಾಸುಲ್ತಾನ, ಜಿಪಂ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಮೈತ್ರಿಗೆ ದೆಹಲಿ ನಾಯಕರ ಒಲವು: ಈ ಉಪ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ. ಶಾಸಕರನ್ನು ವಸ್ತುವಿನಂತೆ ಖರೀದಿ ಮಾಡುವ ಪಕ್ಷದ ಸರ್ಕಾರ ಬೇಕೋ ಅಥವಾ ಜನಪರ ಇರುವ ಸರ್ಕಾರ, ಜನರ ಕಣ್ಣೀರು ಒರೆಸುವ ನಾಯಕ ಬೇಕೋ ಎಂಬುದನ್ನು ಉಪ ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಫ್ರೆಂಡ್ಲಿ ಫೈಟ್ ಮಾಡೋಣವೆಂದು ಹೇಳಿದ್ದೆ. ಆದರೆ, ದೆಹಲಿಯ ಕೆಲ ನಾಯಕರು ಮೈತ್ರಿ ಮಾಡಿಕೊಳ್ಳೋಣ ಅಂದಿದ್ದರು. ರಾಜ್ಯದ ನಾಯಕರು ಮೈತ್ರಿ ಬೇಡ ಅಂದಿದ್ದರು. ರಾಜ್ಯದ ನಾಯಕರು ಈಗಲೂ ಮೈತ್ರಿ ಬೇಡ ಅನ್ನುತ್ತಾರೆ, ದೆಹಲಿ ನಾಯಕರು ಒಲವು ತೋರಿದ್ದಾರೆ. ಆದರೆ, ಅಂತಿಮವಾಗಿ ಏನಾಗಲಿದೆ ಅನ್ನುವುದು ಗೊತ್ತಿಲ್ಲ. ನಾವಂತೂ 15 ಕ್ಷೇತ್ರಗಳಿಗೆ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇವೆ ಎಂದರು.