Advertisement

ಅಂದು ಕೂಲಿ ಕಾರ್ಮಿಕ ಮಹಿಳೆ.. ಇಂದು ಸ್ವಂತ ಉದ್ಯೋಗದಿಂದ ಸುಖಿ ಜೀವನ

12:34 AM Mar 08, 2022 | Team Udayavani |

ಹುಣಸೂರು : ಅಂದು ಕೂಲಿ ಕಾರ್ಮಿಕ ಮಹಿಳೆ.. ಇಂದು ಸಾಧಕ ಮಹಿಳೆಯ ಯಶೋಗಾಥೆ ಇದು.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕಾಡುವಡ್ಡರಗುಡಿಯ ನಾಗೇಗೌಡರ ಪತ್ನಿ ರೇಣುಕಾರವರೇ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಯೋಜನೆಯ ಸಂಜೀವಿನಿ ಯೋಜನೆಯ ಕರೀಮುದ್ದನಹಳ್ಳಿ ಗ್ರಾ.ಪಂ. ಒಕ್ಕೂಟದ ಸಮುದಾಯ ಬಂಡವಾಳ ನಿಧಿಯ ನೆರವಿನ ಮೂಲಕ ಪ್ರಗತಿಯ ಹಾದಿ ಕಂಡುಕೊಂಡಿದ್ದು, ಸುಖಿ ಜೀವನ ನಡೆಸುತ್ತಿದ್ದಾರೆ.

55 ವರ್ಷದ ರೇಣುಕಾ ಬಡತನದ ಬೇಗೆಯಲ್ಲಿ ಬೆಂದರೂ ತಾಯಿಯ ಶಿಕ್ಷಣ ಪ್ರೇಮದಿಂದಾಗಿ ದೂರದ ರತ್ನಪುರಿಗೆ ನಡೆದುಕೊಂಡೇ ಬಂದು ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿರುವ ರೇಣುಕಾರವರು ನಂತರ ಜೀವನೋಪಾಯಕ್ಕಾಗಿ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಇವರದೇ ರೀತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಅದೇ ಊರಿನ ನಾಗೇಗೌಡರನ್ನು ವಿವಾಹವಾದ ಇವರು ಸ್ವಸಹಾಯ ಸಂಘ ಅಸ್ತಿತ್ವಕ್ಕೆ ಬಂದ ವೇಳೆ ಅರೊಣೋದಯ ಮಹಿಳಾ ಸಂಘ ಸೇರಿ ಕೂಲಿ ಹಣ ಉಳಿಸಿ ಉಳಿತಾಯ ಮಾಡಿದರು. ಸಾಲ ಸೌಲಭ್ಯವನ್ನೂ ಪಡೆದರು. ಆನಂತರದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಯೋಜನೆಯ ಸಂಜೀವಿನಿ ಯೋಜನೆಯಡಿ ರಚನೆಯಾದ ಮಹಿಳಾ ಒಕ್ಕೂಟಕ್ಕೆ ಸೇರಿ ಸಮುದಾಯ ಬಂಡವಾಳ ನಿಧಿ ಯೋಜನೆಯಡಿ ಸಾಲ ಪಡೆದು ಹೈನುಗಾರಿಕೆ ಆರಂಭಿಸಿದ ಇವರು ಹಸುಗಳನ್ನು ಸಾಕಣೆ ಮಾಡಿ ಆರಂಭದಲ್ಲಿ ಸಾಕಷ್ಟು ಆದಾಯ ಕಂಡುಕೊಂಡರು. ಗುಡಿಸಲಿನಲ್ಲಿದ್ದ ಇವರೀಗ ಸುಸಜ್ಜಿತ ಮನೆ ನಿರ್ಮಿಸಿಕೊಂಡಿದ್ದಾರೆ. ಪುತ್ರ ಐಟಿಐ ಮಾಡಿದ್ದರೆ, ಪುತ್ರಿಯನ್ನು ಎಂ.ಕಾಂ. ವರೆಗೂ ಓದಿಸಿ, ಮದುವೆಯನ್ನೂ ಮಾಡಿದ್ದಾರೆ.

ಗ್ರಾಮದಲ್ಲಿ ಆರಂಭಗೊಂಡ ಮಹಿಳಾ ಡೇರಿಯ ಕಾರ್ಯದರ್ಶಿಯಾಗಿ ನೇಮಕಗೊಂಡು ಹಾಲು ಉತ್ಪಾದಕರ ಸಂಘದ ಬದ್ದತೆಯುಳ್ಳ ಸದಸ್ಯರಿಂದ ಇಂದು 10 ಲಕ್ಷರೂ ಲಾಭದಲ್ಲಿರುವುದಲ್ಲದೆ, 10 ಲಕ್ಷರೂ ವೆಚ್ಚದ ಡೇರಿ ಕಟ್ಟಡವನ್ನು ನಿರ್ಮಿಸಿದ್ದು. ಇವರೇ ನಿತ್ಯ 50 ಲೀ. ಹಾಲು ಹಾಕುತ್ತಿದ್ದಾರೆ. ಉತ್ಪಾದಕರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕೆಲವೇ ಡೇರಿಗಳಲ್ಲಿ ಇದು ಒಂದೆನಿಸಿದೆ.

Advertisement

ಇದನ್ನೂ ಓದಿ : ಬಿಸಿಯೂಟ ಸೇವಿಸಿದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಅತ್ಯುತ್ತಮ ಗ್ರಾ.ಪಂ.ಸದಸ್ಯೆ:
2007 ರಲ್ಲಿ ನಡೆದ ಕರೀಮುದ್ದನಹಳ್ಳಿ ಗ್ರಾ.ಪಂ.ಚುನಾವಣೆಯಲ್ಲಿ ತಾಲೂಕಿನಲ್ಲೇ ಅತೀ ಹೆಚ್ಚು ಅಂತರದಿಂದ ಗೆದ್ದು ಬೀಗಿದ ಇವರು ಅತ್ಯುತ್ತಮ ಪ್ರತಿನಿಧಿಯಾಗಿ ದೆಹಲಿಯಲ್ಲಿ ನಡೆದ ಗ್ರಾ.ಪಂ.ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದು ವಿಶೇಷ.

ಇದೀಗ ಸಂಜೀವಿನಿ ಯೋಜನೆಯಡಿ ಹಿಟ್ಟಿನ ಗಿರಣಿ ಸ್ಥಾಪಿಸಿದ್ದಾರೆ, ನಾಟಿ ಕೋಳಿ, ಮೊಟ್ಟೆಕೋಳಿ ಸಾಕಣೆ ನಡೆಸುತ್ತಿದ್ದು, ಆಟೋಒಂದನ್ನು ಸಹ ಖರೀದಿಸಿದ್ದಾರೆ. ಪ್ರಸ್ತುತ ರಾಗಿ, ಅಕ್ಕಿ ಹಿಟ್ಟು ಹಾಗೂ ಕಾರಪುಡಿಯನ್ನು ತಯಾರಿಸಿ ಬ್ರಾಂಡ್ ನಿರ್ಮಿಸಿ ಮಾರುಕಟ್ಟೆ ಪ್ರವೇಶಕ್ಕೆ ಸಿದ್ದರಾಗಿದ್ದಾರೆ.

ಸಂಜೀವಿನಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿಕಂಡುಕೊಂಡಿರುವ ರೇಣುಕಾ ಜಿಲ್ಲೆಗೆ ಮಾದರಿಯಾಗಿದ್ದಾರೆ. ಸಂಜೀವಿನಿ ಯೋಜನೆಯಿಂದ ಸಾಕಷ್ಟು ನೆರವು ದೊರೆಯಲಿದ್ದು. ಇತರೆ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಲಿ.

– ಮಂಜುಳನರಗುಂದ, ಎನ್.ಆರ್.ಎಲ್.ಎಂ. ಸಂಜೀವಿನಿ ವ್ಯವಸ್ಥಾಪಕಿ.

Advertisement

Udayavani is now on Telegram. Click here to join our channel and stay updated with the latest news.

Next