ಹುಣಸೂರು: ತಾಲೂಕಿನ ಹನಗೋಡಿನ ಲಕ್ಷ್ಮಣ ತೀರ್ಥ ನದಿಯಲ್ಲಿ ಅಕ್ರಮ ಮರಳು ಸಂಗ್ರಹಣೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಸಂಗ್ರಹಿಸಿದ್ದ ಮರಳು, ಕೃತ್ಯಕ್ಕೆ ಬಳಸಿದ್ದ ಒಂದು ಜೆಸಿಬಿ ಮತ್ತು ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.
ಹನಗೋಡು-ಕೊಳವಿಗೆ ರಸ್ತೆಯ ಸೇತುವೆಯ ಬಳಿಯಲ್ಲಿರುವ ಮೈಸೂರು ನಗರ ಮೂಲದ ವ್ಯಕ್ತಿಗೆ ಸೇರಿದ ತೋಟದಲ್ಲಿ ಲಕ್ಷ್ಮಣ ತೀರ್ಥ ನದಿಯಿಂದ ಜೆಸಿಬಿ ಮೂಲಕ ಮರಳು ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಎಂ.ಕೆ.ಮಹೇಶ್ ನೇತೃತ್ವದಲ್ಲಿ ಸಬ್‌ಇನ್ಸ್ಪೆಕ್ಟರ್ ರಾಮಚಂದ್ರನಾಯಕ ಸೇರಿದಂತೆ ಸಿಬ್ಬಂದಿ ದಾಳಿ ನಡೆಸಿ, ನದಿಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಇಪ್ಪತ್ತು ಟ್ರ್ಯಾಕ್ಟರ್ ನಷ್ಟು ಮರಳು, ಕೃತ್ಯಕ್ಕೆ ಬಳಸಿದ್ದ ಜೆಸಿಬಿ ಹಾಗೂ ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎ.ಎಸ್.ಐ.ಗಳಾದ ಅಂತೋಣಿ ಕ್ರೂಸ್, ಸುರೇಶ್, ಸಿಬ್ಬಂದಿ ವಿಜಯರಾಘು, ಲಿಖಿತ್, ವಿಜಯಕುಮಾರ್, ಸುರೇಶ್ ಭಾಗವಹಿಸಿದ್ದರು.